ChikkaballapurDistrictsKarnatakaLatestMain Post

ಸಿನಿಮೀಯ ಶೈಲಿಯಲ್ಲಿ ಪೊಲೀಸರನ್ನೇ ಕೊಲ್ಲಲು ಯತ್ನಿಸಿದ ಡಕಾಯಿತರು

ಚಿಕ್ಕಬಳ್ಳಾಪುರ: ಸಿನಿಮೀಯ ರೀತಿಯಲ್ಲಿ ಪೊಲೀಸರ ಮೇಲೆಯೇ ಡಕಾಯಿತರು ದಾಳಿ ನಡೆಸಿ, ಹತ್ಯೆ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.

ಬೆಂಗಳೂರಿನ ಮಹದೇವಪುರ ಪೊಲೀಸರು ಸಂಚರಿಸುತ್ತಿದ್ದ ಖಾಸಗಿ ಇನ್ನೋವಾ ಕಾರಿಗೆ ಹಿಂಬದಿಯಿಂದ ಡಕಾಯಿತರು ತಮ್ಮ ಮಾರುತಿ ಸಿಯಾಝ್ ಕಾರಿನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾರೆ.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದರ ಸಂಬಂಧ ಬಾಗೇಪಲ್ಲಿ ಮೂಲದವರು ಎನ್ನಲಾದ ಗಿರೀಶ್ ಹಾಗೂ ಪ್ರಸಾದ್ ಬಂಧನಕ್ಕೆ ಪೊಲೀಸರು ಬೆಂಗಳೂರು ನಗರದಿಂದ ಬರುತ್ತಿದ್ದರು. ಪೊಲೀಸರು ಬರುವ ಮಾಹಿತಿ ತಿಳಿದು ಡಕಾಯಿತರ ಗ್ಯಾಂಗ್ ಪೊಲೀಸರಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಘಟನೆಯಲ್ಲಿ ಇನ್ನೋವಾ ಕಾರು ಪಲ್ಟಿಯಾಗಿದ್ದು ಅದೃಷ್ಟವಶಾತ್ ಇನ್ನೋವಾ ಕಾರಿನಲ್ಲಿದ್ದ ಪೊಲೀಸರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ನಂತರ ಡಕಾಯಿತರ ಕಾರು ಸ್ವಲ್ಪ ದೂರದಲ್ಲಿ ಕೆಟ್ಟು ನಿಂತಿದ್ದು, ಕಾರು ಬಿಟ್ಟು ಡಕಾಯಿತರು ಪರಾರಿಯಾಗಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

Back to top button