ಕಲಬುರಗಿ: ಲಾರಿ ಚಾಲಕನ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದು, ಈ ವೇಳೆ ಹಲ್ಲೆ ತಡೆಯಲು ಬಂದ ಆತನ ಮಗನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿಯ ಆಳಂದ ರಸ್ತೆಯ ಟೋಲ್ ಗೇಟ್ ಬಳಿ ನಡೆದಿದೆ.
ಮೃತ ಯುವಕ ಮಹಾರಾಷ್ಟ್ರ ಮೂಲದ ಯುವರಾಜ್(19) ಎಂಬವನಾಗಿದ್ದಾನೆ. ಇಂದು ಬೆಳಗ್ಗೆ ಲಾರಿ ಚಾಲಕನಾದ ದಿಗಂಬರ ಬಹಿರ್ದೆಸೆಗೆ ಎಂದು ಹೋದಾಗ ಆಗಂತುಕರು ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ಆತನ ಮಗ ಯುವರಾಜ ತಂದೆಯ ರಕ್ಷಣೆಗೆ ಧಾವಿಸಿದಾಗ ಹಂತಕರು ಯುವಕನ ಕುತ್ತಿಗೆಗೆ ಚಾಕುವಿನಿಂದ ಇರಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ತಂದೆ ಮತ್ತು ಮಗ ಇಬ್ಬರೂ ಲಾರಿ ಚಾಲಕರಾಗಿದ್ದು, ಮಹಾರಾಷ್ಟ್ರದ ಲಾತೂರರಿಂದ ಕಲಬುರಗಿಗೆ ಬರುತ್ತಿದ್ದರು. ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.