ಬೆಂಗಳೂರು: ಬುಧವಾರ ರಾತ್ರಿ ರಾಜ್ಯದ ವಿವಿಧೆಡೆ ಮಳೆ ಅಬ್ಬರ ಜೋರಾಗಿದ್ದು, ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.
Advertisement
ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರಂ, ಮೆಜೆಸ್ಟಿಕ್, ಹೆಬ್ಬಾಳ ಸೇರಿದಂತೆ ಹಲವೆಡೆ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಡಿದರು. ಹಾಗೆಯೇ ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಬೋರ್ಡ್ ಮಧ್ಯೆ ಎಲಿವೇಟೆಡ್ ಫ್ಲೈ ಓವರ್ ಮೇಲೆ ನೀರು ನಿಂತಿದೆ. ಅಲ್ಲದೆ ರಸ್ತೆಯಲ್ಲಿ ಸುಮಾರು 2 ಅಡಿ ನೀರು ತುಂಬಿರುವುದರಿಂದ ವಾಹನಗಳು ಕೆಟ್ಟು ನಿಂತಿವೆ. ಮಳೆಗೆ ರಾಜಕಾಲುವೆ ತುಂಬಿ ಹರಿದು ಮಡಿವಾಳದ ಅಗ್ರಕೆರೆ ಸೇರಿದೆ.
Advertisement
Advertisement
ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ಸುಮಾರು 2 ಗಂಟೆ ಕಾಲ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ನಗರದ ಬಿಆರ್‌ಟಿಎಸ್ ಬಸ್ ಕಾರಿಡಾರ್ ಜಲಾವೃತವಾಗಿದೆ. ಇದರಿಂದ ಧಾರವಾಡ-ಹುಬ್ಬಳ್ಳಿ ಮಧ್ಯೆ ಓಡಾಡುವ ಬಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಟೋಲ್‍ಗೇಟ್ ಬಳಿ ರಸ್ತೆ ನೀರಿನಿಂದ ಆವರಿಸಿಕೊಂಡಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
Advertisement
ರಾಯಚೂರಿನಲ್ಲಿ ಭಾರೀ ಮಳೆಯಾಗಿದ್ದು ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಬಳಿಯ ಸೇತುವೆಯ ರಸ್ತೆ ಕೊಚ್ಚಿಹೋಗಿದೆ. ಪ್ರಯಾಣಿಕರು, ವಿದ್ಯಾರ್ಥಿಗಳು, ಅಕ್ಕಪಕ್ಕದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಸೇರಿದ ರಸ್ತೆ ಇದಾಗಿದ್ದು ಈಗ ಬೀದರ್, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಬೆಂಗಳೂರು ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಕುಂಭದ್ರೋಣ ಮಳೆ ಆರ್ಭಟ ಹೆಚ್ಚಾಗಲಿದ್ದು, ಜುಲೈ 22ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಜೊತೆಗೆ ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದ ಇರಲು ಜಿಲ್ಲಾಡಳಿತ ಸೂಚನೆ ರವಾನಿಸಿದೆ.