ನವದೆಹಲಿ: ಇನ್ನು ಮುಂದೆ ನೀವು ರೇಷನ್ ಅಂಗಡಿಗಳಲ್ಲಿ ಕಾರ್ಡ್ ಉಜ್ಜಬಹುದು. ನ್ಯಾಯಬೆಲೆ ಅಂಗಡಿಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರ ನಡೆಸಲು ಪೂರಕ ವ್ಯವಸ್ಥೆಯನ್ನು ರೂಪಿಸುವಂತೆ ಎಲ್ಲ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯ ಸೂಚಿಸಿದೆ.
ಇಂಟರ್‍ನೆಟ್, ಟೆಲಿಕಾಂ ಸೌಲಭ್ಯಗಳನ್ನು ನೋಡಿಕೊಂಡು ಆರಂಭದಲ್ಲಿ ಮಹಾನಗರ, ನಗರ, ಜಿಲ್ಲಾ ಕೇಂದ್ರಗಳು, ಪುರಸಭೆ ಮತ್ತು ಇತರೇ ನಗರಗಳಲ್ಲಿ ಹಂತ ಹಂತವಾಗಿ ಕ್ಯಾಶ್ ಲೆಸ್ ವ್ಯವಹಾರವನ್ನು ಕಾರ್ಯರೂಪಕ್ಕೆ ತನ್ನಿ ಎಂದು ಹೇಳಿದೆ.
Advertisement
ಜನವರಿ 19 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ‘ಪಿಡಿಎಸ್ ರಿಫಾರ್ಮ್ಸ್ ಮತ್ತು ಕ್ಯಾಶ್ ಲೆಸ್ ವ್ಯವಹಾರ’ ವಿಷಯದ ಮೇಲೆ ರಾಷ್ಟ್ರ ಮಟ್ಟದ ಸಮ್ಮೇಳನ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ. ಅಷ್ಟೇ ಅಲ್ಲದೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆಹಾರ ಕಾರ್ಯದರ್ಶಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕ್ಯಾಶ್‍ಲೆಸ್ ವ್ಯವಹಾರ ಅಳವಡಿಕೆಯ ಬಗ್ಗೆ ವಿವರಣೆ ನೀಡಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.