ChikkamagaluruDistrictsKarnatakaLatestMain Post

ಶಾಸಕರೇ ಉದ್ಘಾಟಿಸಬೇಕೆಂದು ರಸ್ತೆಗೆ ಬೇಲಿ- ಸ್ಥಳೀಯರಿಂದ ತೆರವು

ಚಿಕ್ಕಮಗಳೂರು: ರಸ್ತೆಯನ್ನು ಶಾಸಕರೇ ಉದ್ಘಾಟಿಸಬೇಕು. ಅಲ್ಲಿವರೆಗೂ ಸಂಚಾರಕ್ಕೆ ಅವಕಾಶವಿಲ್ಲ ಎಂದು ಶಾಸಕರ ಬೆಂಬಲಿಗರು ರಸ್ತೆಗೆ ಹಾಕಿದ್ದ ಬೇಲಿಯನ್ನು ಸ್ಥಳೀಯರು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಕಳಸ ತಾಲೂಕಿನ ಮಾವಿನಹೊಲ ಗ್ರಾಮದ ಬಳಿ ಸುಮಾರು 3 ಕೋಟಿ ಮೌಲ್ಯದ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡು ತಿಂಗಳೇ ಕಳೆದಿತ್ತು. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ ಬಿಜೆಪಿ ಸದಸ್ಯರು ಶಾಸಕರೇ ಬಂದು ಉದ್ಘಾಟನೆ ಮಾಡಬೇಕು. ಅಲ್ಲಿವರೆಗೂ ಸಂಚಾರಕ್ಕೆ ಅವಕಾಶವಿಲ್ಲ ಎಂದು ರಸ್ತೆಗೆ ಬೇಲಿ ಹಾಕಿ, ಬಂಡೆ ಕಲ್ಲುಗಳನ್ನಿಟ್ಟು, ಬ್ಯಾರಿಕೇಡ್ ಜೋಡಿಸಿ ಬೀಗ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಮಾಡಿತ್ತು.

ಈ ಬಗ್ಗೆ ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. 6 ಕಿ.ಮೀ ದೂರವನ್ನು ಸುಮಾರು 15-20 ಕಿ.ಮೀ ಸುತ್ತಿಕೊಂಡು ಬರಬೇಕಿತ್ತು. ರಸ್ತೆಗೆ ಬೇಲಿ ಹಾಕಿದ್ದರಿಂದ 2 ಕಿ.ಮೀ ದೂರದ ಮದುವೆ ಮನೆಯವರು ಮದುವೆ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಹೋಗಿದ್ದರು. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹ ಜನ ತೀವ್ರ ಸಂಕಷ್ಟ ಪಡುತ್ತಿದ್ದರು. ಕಳೆದ ನಾಲ್ಕೈದು ದಿನಗಳಿಂದ ಪಶ್ಚಿಮಘಟ್ಟಗಳ ಸಾಲು ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮಗ್ಗಲಿನ ಕಳಸ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹಾಗಾಗಿ, ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಇದನ್ನೂ ಓದಿ: ಎಂಎಲ್‍ಎ ಉದ್ಘಾಟನೆ ಮಾಡೋವರೆಗೂ ರೋಡ್ ಬಂದ್ ಮಾಡಿದ ಬಿಜೆಪಿ ಸದಸ್ಯರು

ಈ ಎಲ್ಲದರ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಮಳೆ ಸುರಿಯುತ್ತಿದ್ದರೂ, ಮಳೆ ಮಧ್ಯೆಯೇ ಸ್ಥಳೀಯರು ತಂತಿಬೇಲಿಯನ್ನು ಕಿತ್ತುಹಾಕಿ, ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬಂಡೆಯನ್ನು ರಸ್ತೆಯ ಮತ್ತೊಂದು ಬದಿಗೆ ಉರುಳಿಸಿ ತಮ್ಮ ದಾರಿಯನ್ನು ತಾವೇ ನಿರ್ಮಿಸಿಕೊಂಡಿದ್ದಾರೆ. ಬಿಜೆಪಿ ಸದಸ್ಯರ ವರ್ತನೆಗೆ ತಾಲೂಕು ಕಾಂಗ್ರೆಸ್ ಹಾಗೂ ಜೆಡಿಎಸ್ ಘಟಕ ಕೂಡ ಅಸಮಾಧಾನ ಹೊರಹಾಕಿ, ರಸ್ತೆ ದುರಸ್ತಿಗೆ ಹಣ ಕೊಟ್ಟವರು ಯಾರೆಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ನೀವು ಬಳಸುತ್ತಿರುವ ಎಣ್ಣೆಯಲ್ಲಿ ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ: ಶೋಭಾ ಕರಂದ್ಲಾಜೆ

Leave a Reply

Your email address will not be published.

Back to top button