Connect with us

Bengaluru City

ಗಾಡಿ ಉಜ್ಜಿಕೊಂಡು ಹೋಗಿದ್ದಕ್ಕೆ ಕಿರಿಕ್, 500 ರೂ.ಗೆ ಟೆಕ್ಕಿ ಕೊಲೆ- ಆರೋಪಿಯನ್ನ ಚೇಸ್ ಮಾಡಿ ಹಿಡಿದ ಪೊಲೀಸರು

Published

on

ಬೆಂಗಳೂರು: ನಗರದಲ್ಲಿ ಟೆಕ್ಕಿಯೊಬ್ಬರನ್ನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಪ್ರಣಾಯ್ ಮಿಶ್ರಾ ಅವರನ್ನ ಸೋಮವಾರದಂದು ತಾವರೆಕೆರೆ ಮುಖ್ಯ ರಸ್ತೆಯ ಚಾಕ್ಲೇಟ್ ಫ್ಯಾಕ್ಟರಿ ಬಳಿ ಇರಿದು ಕೊಲೆ ಮಾಡಲಾಗಿತ್ತು. ಪ್ರಣಾಯ್ ಅವರ ದ್ವಿಚಕ್ರ ವಾಹನ ತನ್ನ ವಾಹನಕ್ಕೆ ಉಜ್ಜಿಕೊಂಡು ಹೋಯಿತೆಂದು ರೌಡಿಶೀಟರ್ ಕಾರ್ತಿಕ್ ಮತ್ತು ಆತನ ಸ್ನೇಹಿತ ಅರುಣ್ ಪ್ರಣಾಯ್‍ರನ್ನು ಹಿಂಬಾಲಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದು ರಸ್ತೆ ಗಲಾಟೆಗೆ ನಡೆದ ಕೊಲೆ ಎಂದು ಪೊಲೀಸರು ಹೇಳಿದ್ದಾರೆ.

500 ರೂ.ಗೆ ಕೊಲೆ: ಇನ್ನೂ ಆಘಾತಕಾರಿ ಸಂಗತಿ ಅಂದ್ರೆ ಕೇವಲ 500 ರೂ. ಗಾಗಿ ಈ ಕೊಲೆ ನಡೆದಿದೆ. ಗಾಡಿ ಉಜ್ಜಿಕೊಂಡು ಹೋದ ಕಾರಣ ಮುರಿದುಹೋಗಿದ್ದ ಮಡ್ ಗಾರ್ಡ್ ಸರಿಪಡಿಸಲು 500 ರೂ. ಕೊಡಬೇಕು ಎಂದು ರೌಡಿಗಳು ಜಗಳ ಮಾಡಿದ್ದರು. ಆದ್ರೆ ಪ್ರಣಾಯ್, ಇದು ನನ್ನ ತಪ್ಪಲ್ಲ ಎಂದು ಹೇಳಿ ಹಣ ನೀಡಲು ನಿರಾಕರಿಸಿ ಅಲ್ಲಿಂದ ಹೊರಟುಹೋಗಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು, ಪ್ರಣಾಯ್ ಅವರನ್ನ ಬೈಕ್‍ನಲ್ಲಿ ಹಿಂಬಲಿಸಿ ಅಡ್ಡಗಟ್ಟಿದ್ರು. ಪ್ರಣಾಯ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಕೆಳಗೆ ಬಿದ್ದಿದ್ದರು. ಇದರ ಲಾಭ ಪಡೆದ ಆರೋಪಿಗಳು ಪ್ರಣಾಯ್ ಅವರ ಮುಖಕ್ಕೆ ಹೊಡೆದು, ಎರಡು ಬಾರಿ ಹೊಟ್ಟೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣ ಬೇಧಿಸಲು ರಚಿಸಲಾಗಿದ್ದ ಪೊಲೀಸರ ತಂಡ ಸಿಸಿಟಿವಿ ಆಧಾರಿಸಿ ಬೈಕ್ ನೋಂದಣಿ ಸಂಖ್ಯೆಯನ್ನು ಪತ್ತೆ ಮಾಡಿ ರೌಡಿಗಳನ್ನ ಟ್ರೇಸ್ ಮಾಡಿದ್ದಾರೆ. ಮೂರು ಸುತ್ತು ಫೈರಿಂಗ್ ಮಾಡಿದ ನಂತರ 24 ವರ್ಷದ ಆರೋಪಿ ಕಾರ್ತಿಕ್‍ನನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನ ಬಂಧಿಸಲು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಬೇಕಾಯ್ತು. ಸದ್ಯ ಆರೋಪಿ ಕಾರ್ತಿಕ್ ಬುಲೆಟ್ ಏಟಿನಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ನಮಗೆ ಆರೋಪಿಯ ಬಗ್ಗೆ ಖಚಿತ ಮಾಹಿತಿ ಇತ್ತು. ನಮ್ಮ ತಂಡ ಅವರನ್ನ ಪತ್ತೆ ಮಾಡಿ ಚೇಸ್ ಮಾಡಿದ್ರು. ಅವರನ್ನ ಬಂಧಿಸಲು ಮುಂದಾದಾಗ, ನಮ್ಮ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ರು. ಹೀಗಾಗಿ ಗುಂಡು ಹಾರಿಸಬೇಕಾಯ್ತು ಎಂದು ಹಿರಿಯ ಅಧಿಕಾರಿ ಎಂಬಿ ಬೋರಲಿಂಗಯ್ಯ ಹೇಳಿದ್ದಾರೆ. ಕಾರ್ತಿಕ್‍ನ ಸ್ನೇಹಿತ ಅರುಣ್‍ಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಣಾಯ್ ರಾಯ್ ವಾಸವಿದ್ದ ಮನೆಯಿಂದ ಕೆಲವು ಕಿ.ಮೀ ದೂರದಲ್ಲೇ ರಕ್ತದ ಮಡುವಲ್ಲಿ ಬಿದ್ದಿದ್ದರು. ಸ್ಥಳದಲ್ಲಿದ್ದವರು ಪ್ರಣಾಯ್‍ರನ್ನು ಆಸ್ಪತ್ರೆಗೆ ದಾಖಲಿಸಿದರಾದ್ರೂ ಅಷ್ಟರಲ್ಲಾಗ್ಲೇ ತಡವಾಗಿತ್ತು. ಭಾನುವಾರದಂದು ಪ್ರಣಾಯ್ ಸ್ನೇತರೊಂದಿಗೆ ಹೊರಗೆ ಪಾರ್ಟಿ ಮುಗಿಸಿ ಮನೆಗೆ ಹೋಗಿ ಮತ್ತೆ ತನ್ನ ಗೆಳತಿಯನ್ನು ಭೇಟಿಯಾಗಲು ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪ್ರಣಾಯ್ ಮಿಶ್ರಾ ಮೂಲತಃ ಒಡಿಶಾದವರು ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *