ಬೆಂಗಳೂರು: ಸಿಲಿಕಾನ್ ಸಿಟಿಯ ಆರ್‌ಎಂಸಿ ಯಾರ್ಡ್‌ನಲ್ಲಿ ಇದ್ದಕ್ಕಿದ್ದಂತೆ ಭೂ ಕುಸಿತ ಸಂಭವಿಸಿದ್ದು, ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.
ನಗರದ ಆರ್‌ಎಂಸಿ ಯಾರ್ಡ್‌ನ ಎಂಇಐ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಭೂ ಕುಸಿತ ಉಂಟಾಗಿದೆ. ಸುಮಾರು 12 ಅಡಿಗಿಂತ ಹೆಚ್ಚು ಆಳಕ್ಕೆ ರಸ್ತೆ ಕುಸಿದು ಸ್ಥಳೀಯರಲ್ಲಿ ಹಾಗೂ ವಾಹನಸವಾರರಲ್ಲಿ ಭಯ ಮೂಡುವಂತೆ ಮಾಡಿದೆ. ಎಂಇಐ ರಸ್ತೆಯ ಮಧ್ಯಭಾಗದಲ್ಲಿ ಭೂ ಕುಸಿತವಾಗಿದ್ದು, ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಭೂಮಿ ಕುಸಿಯುವ ಆತಂಕದಲ್ಲಿ ಜನ ಇದ್ದಾರೆ.
ಮಣ್ಣು ಪೂರ್ತಿ ಕುಸಿದಿರುವುದರಿಂದ ಒಂದು ಭಾಗದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ರಸ್ತೆ ಸಮೀಪದಲ್ಲಿ ಓಡಾಡಲು ಜನ ಭಯ ಪಡುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಲಾರಿಯೊಂದು ಹಾದು ಹೋದ ನಂತರ ಈ ಭೂ ಕುಸಿತ ಸಂಭವಿಸಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ಸ್ಥಳೀಯರೇ ಭೂಕುಸಿತವಾದ ರಸ್ತೆಗೆ ಬ್ಯಾರಿಕೇಡ್ ಹಾಕಿ ಹಗ್ಗ ಕಟ್ಟಿದ್ದಾರೆ. ಕೆಳಗೆ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಮಣ್ಣು ಕುಸಿಯುವ ಆತಂಕ ಎದುರಾಗಿದೆ.
ಈ ಹಿಂದೆ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಸಹ ಗುಂಡಿ ಬಿದ್ದು ಆತಂಕ ಸೃಷ್ಟಿಸಿತ್ತು. ನಂತರ ದುರಸ್ಥಿ ಮಾಡಲಾಯಿತು. ಈಗಲೂ ಸಹ ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರ ಬಳಿಕ ಇದೀಗ ಆರ್‍ಎಂಸಿ ಯಾರ್ಡ್ ಬಳಿ ರಸ್ತೆ ಮಧ್ಯೆ ಭೂ ಕುಸಿತ ಸಂಭವಿಸಿದೆ.