ರಾಯಚೂರು: ಕೃಷ್ಣೆಯ ಒಡಲಿನಲ್ಲಿರುವ ನೂರಾರು ಜನರು ಪ್ರಾಣದ ಹಂಗು ತೊರೆದು ಒಂದು ಊರಿನಿಂದ ಇನ್ನೊಂದು ಊರಿಗೆ ಅಥವಾ ಶಾಲೆ, ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರನ್ನ ನಂಬಿ ನಡುಗಡ್ಡೆಯಲ್ಲಿ ವಾಸಿಸುತ್ತಿರುವ ಜನ ನಾಡಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಇಲ್ಲಿನ ರೈತರು ಹಾಗೂ ವಿದ್ಯಾರ್ಥಿಗಳ ಕಷ್ಟ ಎಂಥಾ ಶತ್ರುವಿಗೂ ಬೇಡ.
ಹೌದು. ರಾಯಚೂರಿನ ನಡುಗಡ್ಡೆ ಕುರ್ವಪುರ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಸರ್ಕಸ್ ಮಾಡಲೇಬೇಕು. ಸಾಮಾನ್ಯವಾಗಿ ತೆಪ್ಪದಲ್ಲಿ ಹೋಗೋವಾಗ ತೆಪ್ಪ ಮೇಲ್ಗಡೆ ತೇಲುತ್ತಿರುವಂತಿರುತ್ತದೆ. ಆದ್ರೆ ಇಲ್ಲಿ ಮಾತ್ರ ಈ ತೆಪ್ಪಗಳು 99 ಪರ್ಸೆಂಟ್ ಮುಳುಗಿರುತ್ತವೆ. ವಸ್ತುಗಳ, ಮೂಟೆಗಳ ಭಾರಕ್ಕೆ ತೆಪ್ಪಗಳು ಮುಳುಗಿರತ್ತದೆ. ಇದು ಇಲ್ಲಿ ಸಾಮಾನ್ಯ ಮತ್ತು ಬದುಕೋಕೆ ಇದು ಅನಿವಾರ್ಯ ಕೂಡ ಆಗಿದೆ.
Advertisement
Advertisement
ಇನ್ನೊಂದು ಕಡೆ ಪುಟಾಣಿ ಮಕ್ಕಳು, ಮಹಿಳೆಯರು, ವೃದ್ಧರು ತುಂಬಿ ಹರಿಯುತ್ತಿರುವ ಈ ನದಿಯಲ್ಲಿ ತೆಪ್ಪದಲ್ಲಿ ದಾಟ್ತಾ ಹೇಗೆ ಸಾಗ್ತಾ ಇದ್ದಾರೆ. ಇವರಿಗೆ ಶಾಲೆಗಳಿಗೆ ಬರೋಕೆ ಅಥವಾ ಪಟ್ಟಣಕ್ಕೆ ಬರೋಕೆ ಇದೊಂದು ಮಾರ್ಗ. ಹಾಗಾಗಿ ಪ್ರಾಣದ ಹಂಗು ತೊರೆದು ಇಲ್ಲಿ ಪಯಣಿಸಲೇಬೇಕು. ಇನ್ನು ಈ ನೀರಿನ ಮಟ್ಟವೂ ಜಾಸ್ತಿ ಇದ್ದು, ರೈತರು ತಾವು ಬೆಳೆದ ಬೆಳೆಯನ್ನ ಮಾರುಕಟ್ಟೆಗೆ ಸಾಗಿಸಲು ಇನ್ನಿಲ್ಲದ ಹರಸಾಹಸ ಪಡುತ್ತಾರೆ. ಒಮ್ಮೆ ತೆಪ್ಪದಲ್ಲಿ 40 ಚೀಲ ಭತ್ತ ತಂದರೆ ಅದರಲ್ಲಿ 10 ರಿಂದ 15 ಚೀಲ ನೀರುಪಾಲಾಗುತ್ತವೆ ಅಂತ ರೈತ ಮಹಾದೇವ್ ತಿಳಿಸಿದ್ದಾರೆ.
Advertisement
ವಿದ್ಯಾರ್ಥಿಗಳು ಶಾಲೆಗೆ ತೆರಳಲು ನಿತ್ಯ ಪ್ರಾಣವನ್ನ ಕೈಯಲ್ಲಿಡಿದೆ ನದಿ ದಾಟಬೇಕು. ಇದರ ನಡುವೆ ಇಲ್ಲಿ ಸಾಗೋವಾಗ ಹಾವು, ಮೊಸಳೆ ಕಾಟ ಬೇರೆ. ಇದರಿಂದ ಸಾವು ನೋವುಗಳು ಸಹ ಸಂಭವಿಸಿವೆ. ನದಿಯನ್ನ ದಾಟುವ ಭಯದಿಂದ ಎಷ್ಟೋ ಹೆಣ್ಣುಮಕ್ಕಳು ಶಾಲೆಯನ್ನೇ ಬಿಟ್ಟಿದ್ದಾರೆ. ಅಲ್ಲದೇ ಸರಿಯಾದ ಸಮಯಕ್ಕೆ ತೆಪ್ಪ ಸಿಗದೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಹಿಂದುಳಿಯುವಂತಾಗಿದೆ.
Advertisement
ಇನ್ನು ಇಲ್ಲಿನ ದತ್ತಾತ್ರೇಯ ದೇವಾಲಯ ತುಂಬಾನೇ ಪ್ರಸಿದ್ಧಿ. ಗೋವಾ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುತ್ತಾರೆ. ನದಿ ದಡದವರೆಗೆ ವಾಹನಗಳಲ್ಲಿ ಬರೋ ಭಕ್ತರು ನಂತರ ರಸ್ತೆ ಮಾರ್ಗವಿಲ್ಲದೇ ಅನಿವಾರ್ಯವಾಗಿ ತೆಪ್ಪದಲ್ಲೇ ಸಾಗ್ತಾರೆ.
ಇಂತಹ ದುಸ್ಥಿತಿಗೆ ಕಾರಣ ಅಪೂರ್ಣವಾಗಿರುವ ಈ ಸೇತುವೆಗಳ ಕಾಮಗಾರಿ. ಇದು ಕುರ್ವಪುರ ಹಾಗೂ ಕುರ್ವಕುರ್ದಾ ನಡುಗಡ್ಡೆ ಗ್ರಾಮಗಳಿಗೆ ಆತ್ಕೂರು ಹಾಗೂ ನಡುಗಡ್ಡೆ ಕುರ್ವಾಕುಲದಲ್ಲಿ ನಿರ್ಮಾಣವಾಗುತ್ತಿರುವ ಎರಡು ಸೇತುವೆ. ಇದು ಇಲ್ಲಿನ 5 ನಡುಗಡ್ಡೆಗಳಾದ ಕುರ್ವಪುರ, ನಾರದಗಡ್ಡೆ, ರಾಮಗಡ್ಡೆ, ಮಂಗೀಗಡ್ಡೆ, ಕುರ್ವಾಕುರ್ದಗಳಿಗೆ ಸಂಪರ್ಕ ಸಾಧಿಸಬೇಕು. ಆದ್ರೆ 2011ರಿಂದ ಆಮೆಗತಿಯಲ್ಲಿ ಸಾಗಿರುವ ಎರಡು ಸೇತುವೆಗಳ ಕಾಮಗಾರಿ ಏಳು ವರ್ಷಗಳಾದ್ರೂ ಪೂರ್ಣಗೊಳ್ಳುತ್ತಿಲ್ಲ. ಈಗಂತೂ ಸಂಪೂರ್ಣ ಬಂದ್ ಆಗಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಟ್ಟಾಗ 20 ಫೀಟ್ ಎತ್ತರದ ಪಿಲ್ಲರ್‍ಗಳು ಮುಳುಗಡೆಯಾಗುತ್ತವೆ. ಈ ಎರಡು ಗ್ರಾಮಗಳಲ್ಲಿ ಸುಮಾರು 100 ಕುಟುಂಬಗಳಿದ್ದು, 250ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಆದ್ರೆ ಸೇತುವೆಯಿಲ್ಲದೇ ಜನ ಪ್ರತಿಯೊಂದಕ್ಕೂ ಪರದಾಡುತ್ತಿದ್ದಾರೆ.
ಆತ್ಕೂರು ಗ್ರಾಮದಿಂದ ಕುರ್ವಾಕುಲಕ್ಕೆ ಒಂದು ಕಿ.ಮೀ ಸೇತುವೆಗೆ 14 ಕೋಟಿ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಒಪ್ಪಂದದ ಪ್ರಕಾರ 2013ಕ್ಕೆ ಪೂರ್ಣವಾಗಬೇಕಿತ್ತು. ಡೋಂಗರಾಮಪೂರದಿಂದ ಕುರ್ವಾಕುರ್ದಕ್ಕೆ ಸಂಪರ್ಕ ಕಲ್ಪಿಸಲಿರುವ 275 ಮೀಟರ್ ಉದ್ದದ ಸೇತುವೆಗೆ 7 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು 2012ರಲ್ಲೇ ಕಾಮಗಾರಿ ಮುಗಿಯಬೇಕಿತ್ತು. ಆದ್ರೆ ಕಾಮಗಾರಿ ಗುತ್ತಿಗೆ ಪಡೆದಿರುವ ಹೈದರಾಬಾದ್ ಮೂಲದ ಗುತ್ತಿಗೆದಾರ ಕೆ.ವಿ.ಶೇಷಗಿರಿರಾವ್ ಮೂರು ವರ್ಷದ ಹಿಂದೆ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗಿದ್ದಾನೆ. ಹಾಗಾಗಿ ಬೀಮ್, ಪಿಲ್ಲರ್ ಎಲ್ಲವೂ ಅರ್ಧಕ್ಕೆ ನಿಂತಿದೆ ಅಂತ ಗ್ರಾಮಸ್ಥ ವಿರೇಶ್ ತಿಳಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ಪಶ್ಚಿಮ ಬಂಗಾಳದಿಂದ ಕೆಲಸಗಾರರು ಬರಬೇಕಿದೆ ಅಂತಾರೆ. ಇತ್ತ ಸೇತುವೆಯಿಂದ ಮುಂದಕ್ಕೆ ಬೇಕಾಗುವ ರಸ್ತೆಗಾಗಿ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿಲ್ಲ. ಅಲ್ಲದೇ ನಕ್ಸಲ್ ಪೀಡಿತ ಗ್ರಾಮಗಳಾಗಿದ್ದ ಇಲ್ಲಿ ಈಗ ಜನ ರಸ್ತೆ ಮಾರ್ಗವಿಲ್ಲದೆ ಪ್ರತಿನಿತ್ಯ ಪರದಾಡುತ್ತಿರುವುದಾಗಿ ಶಂಕರ್ ಹೇಳಿದ್ದಾರೆ.
1995ರಲ್ಲಿ ತೆಲಂಗಾಣದಲ್ಲಿ ನಿರ್ಮಾಣಗೊಂಡ ಜುರಾಲಾ ಆಣೆಕಟ್ಟಿನಿಂದ ಇಲ್ಲಿ ಸಮಸ್ಯೆ ನಿರ್ಮಾಣವಾಗಿದೆ. ಆದ್ರೆ ಜಿಲ್ಲಾಡಳಿತ ಬೇಸಿಗೆಯಲ್ಲಿ ಕೃಷ್ಣಾನದಿ ಸಂಪೂರ್ಣ ಬತ್ತಿಹೋದಾಗಲೂ ಕಾಮಗಾರಿ ಕೈಗೆತ್ತಿಕೊಳ್ಳದೆ ವಿಳಂಬ ಮಾಡುತ್ತಿದೆ. ಈಗಲಾದ್ರೂ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ಕೆಲಸ ಅರ್ಧಕ್ಕೆ ಬಿಟ್ಟು ಎಸ್ಕೇಪ್ ಆಗಿರೋ ಗುತ್ತಿಗೆದಾರರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನ ಶೀಘ್ರದಲ್ಲೇ ಪೂರ್ಣಗೊಳಿಸಿ ದತ್ತಾತ್ರೇಯ ದೇಗುಲ ಹಾಗೂ ನಡುಗಡ್ಡೆ ಗ್ರಾಮಗಳ ಜನ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv