ಬೆಳಗಾವಿ: ರೋಡ್ ರೋಲರ್ ಸಮೇತ ಸೇತುವೆ ಕುಸಿದು ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಬಳಿ ನಡೆದಿದೆ.
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಈ ದುರ್ಘಟನೆ ಸಂಭವಿಸಿದೆ. 3 ವರ್ಷಗಳ ಹಿಂದೆಯಷ್ಟೇ ಈ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿತ್ತು. ಕಳಪೆ ಕಾಮಗಾರಿಯ ಕಾರಣ ಸೇತುವೆ ಕುಸಿದು ಬಿದ್ದು ಭಾರಿ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗ ನೂತನ ರಸ್ತೆ ಮಾಡುತ್ತಿರುವ ಅಧಿಕಾರಿಗಳು ಮಾತ್ರ ಹಳೇ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡುವಾಗ ಈ ಘಟನೆ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಬೆರಳು ತೋರಿಸುತ್ತಿದ್ದಾರೆ. ಈ ಸೇತುವೆ ಕೇವಲ ಮೂರೇ ವರ್ಷದಲ್ಲಿ ಮುರಿದು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಒಂದು ವೇಳೆ ಘಟನೆಯಿಂದ ಯಾವುದಾದರೂ ಪ್ರಾಣಾಪಾಯ ಸಂಭವಿಸಿದ್ದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ತನಿಖೆಗೆ ಒತ್ತಾಯಿಸುತ್ತಿದ್ದಾರೆ.