ಚಿತ್ರದುರ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಸೇತುವೆ ಕುಸಿಯುವ ಭೀತಿಯಿಂದ ವಾಹನ ಸಂಚಾರ ನಿರ್ಬಂಧ ಹೇರಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಬಳಿ ವೇದಾವತಿ ನದಿಗೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆ ಬೆಂಗಳೂರಿನಿಂದ ಹೊಸದುರ್ಗ ಸಂಪರ್ಕಿಸುವ ಮೈಸೂರು ಅರಸರ ಕಾಲದ ಜಯ ಚಾಮರಾಜೇಂದ್ರ ಸೇತುವೆಯಾಗಿದೆ.
ಇದು ದಶಕಗಳ ಸೇತುವೆಯಾಗಿದ್ದರಿಂದ ತುಂಬಾ ಹಳೆಯದಾದ ಹಿನ್ನಲೆಯಲ್ಲಿ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಕ್ಕಾಗಿ ಹಳ್ಳ ತೋಡಿದ್ದಾರೆ. ಆದರೆ ಈಗ ಅತಿಯಾದ ಮಳೆಯಿಂದ ಇಂದು ಮುಂಜಾನೆಯಿಂದ ವೇದಾವತಿಯಲ್ಲಿ ನೀರು ಹರಿಯುತ್ತಿದ್ದು, ಸೇತುವೆ ಅಕ್ಕಪಕ್ಕದ ಮಣ್ಣು ಕುಸಿಯುತ್ತಿದೆ.
ಇದರಿಂದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಹೊಸದುರ್ಗ ಪೊಲೀಸರು ಸಂಚಾರ ನಿರ್ಬಂಧಿಸಿ ಬೇರೆ ಮಾರ್ಗವಾಗಿ ಸಂಚರಿಸಲು ವಾಹನಗಳಿಗೆ ಅನುವು ಮಾಡಿಕೊಟ್ಟಿದ್ದಾರೆ.