ಮೈಸೂರು: ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮನೆ ಬಳಿ ರಸ್ತೆ ಬಂದ್ ವಿಚಾರ ರಾತ್ರೋ ರಾತ್ರಿ ಬಗೆಹರಿದಿದೆ. ರಸ್ತೆಯ ಮಧ್ಯೆ ಹಾಕಿದ್ದ ಕಬ್ಬಿಣದ ಕಂಬಿಗಳನ್ನು ತೆರವುಗೊಳಿಸಿದ ಪೊಲೀಸರು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿರುವ ವಿಧಾನ ಪರಿಷತ್ ಸದಸ್ಯ ನಾಗರಾಜ್ ಅವರ ಮನೆಯ ಮುಂಭಾಗದ ರಸ್ತೆಗೆ ದ್ವಿಚಕ್ರ ವಾಹನಗಳು ಬಾರದಂತೆ ರಸ್ತೆಯ ಮಧ್ಯ ಕಬ್ಬಿಣದ ರಾಡ್ ಹಾಕಲಾಗಿತ್ತು. ಈ ಬಗ್ಗೆ ಮಂಗಳವಾರ ಪಬ್ಲಿಕ್ ಟಿವಿ ವರದಿಮಾಡಿತ್ತು.
Advertisement
ರಾಡ್ ಗಳನ್ನು ತೆಗೆಯುವಂತೆ ಸಂದೇಶ್ ನಾಗರಾಜ್ ಸಹೋದರ ಸಂದೇಶ್ ಸ್ವಾಮಿ ಪೊಲೀಸರಿಗೆ ಮನವಿ ಮಾಡಿ ರಾಡ್ ತೆಗೆಸಿದ್ದಾರೆ. ಅಲ್ಲದೇ ನಾವು ರಾಡ್ ಹಾಕುವಂತೆ ಪೊಲೀಸರಿಗೆ ಹೇಳಿರಲಿಲ್ಲ. ಪಕ್ಕದ ಮಾಲ್ ಗೆ ಬರುವ ದ್ವಿಚಕ್ರ ವಾಹನ ಸವಾರರು ನಮ್ಮ ಮನೆಗಳ ಮುಂದೆ ವಾಹನ ನಿಲ್ಲಿಸದಂತೆ ತಪ್ಪಿಸಿ ಅಂತಾ ಕೇಳಿದ್ದೆವು. ನಮ್ಮ ಮೇಲೆ ಆರೋಪ ಬಂದ ಕಾರಣ ಸ್ವತಃ ನಾನೇ ಮುಂದೆ ನಿಂತು ಇದನ್ನು ತೆಗೆಸಿದ್ದೇನೆ ಎಂದು ಸಂದೇಶ್ ಸ್ವಾಮಿ ಸ್ಪಷ್ಟೀಕರಣ ನೀಡಿದರು.
Advertisement
ನಮ್ಮ ಮನೆಗಳ ಮುಂದೆ ವಾಹನ ಸವಾರರು ವಾಹನಗಳನ್ನ ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಇದರಿಂದ ನಮಗೆ ಓಡಾಡಲು ಕಷ್ಟವಾಗುತ್ತೆ. ಆದ್ರೆ ಇಂದು ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಮತ್ತೆ ಸಮಸ್ಯೆ ಶುರುವಾಗಿದೆ ಎಂದು ಸಂದೇಶ್ ಸ್ವಾಮಿ ಬೇಸರ ವ್ಯಕ್ತಪಡಿಸಿದರು.