ಚಂಡೀಗಢ: ಸೇನಾ ನೇಮಕಾತಿ ರ‍್ಯಾಲಿ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುಮಾರು 10 ಮಂದಿ ಮೃತಪಟ್ಟ ಘಟನೆ ಹರಿಯಾಣದ ಜಿಂದ್-ಹನ್ಸಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ರಾತ್ರಿ 10.30ರ ಸುಮಾರಿಗೆ ಯುವಕರು ಸೇನಾ ನಾಮಕಾತಿ ರ‍್ಯಾಲಿ ಮುಗಿಸಿ ಮನೆ ಕಡೆ ವಾಪಸ್ಸಾಗುತ್ತಿದ್ದರು. ಯುವಕರು ವಾಹನದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ರಾಮ್ರಾರಿ ಗ್ರಾಮದ ಸಮೀಪ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ವಾಹನ ಜಿಂದ್ ಸಿಟಿಯದ್ದಾಗಿದ್ದು, ಸಿಟಿಯಿಂದ 10 ಕಿ.ಮೀ ದೂರದಲ್ಲಿ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಮೃತಪಟ್ಟವರಲ್ಲಿ ಮೂವರನ್ನು ಗುರುತಿಸಲಾಗಿದೆ. ಅಲ್ಲದೆ ಅವರ ಬ್ಯಾಗ್ ನಲ್ಲಿ ಕೆಲ ದಾಖಲೆಗಳು ದೊರಕಿವೆ. ಹೀಗಾಗಿ ಆ ದಾಖಲೆಗಳ ಮೂಲಕ ಅವರ ಮನೆಯವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕಪ್ತಾಲ್ ಸಿಂಗ್ ತಿಳಿಸಿದ್ದಾರೆ.
ಮೃತರಲ್ಲಿ ಐವರು ಒಂದೇ ಗ್ರಾಮದವರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಪರಂಜೀತ್ ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.