ಮಂಡ್ಯ: ಬೈಕ್ ಡಿವೈಡರ್‍ಗೆ ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕದ ರಸ್ತೆಗೆ ಬಿದ್ದ ಮಹಿಳೆ ಮೇಲೆ ಕಾರು ಹರಿದು ಆಕೆ ಮೃತಪಟ್ಟ ಘಟನೆ ಶ್ರೀರಂಗಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬೆಂಗಳೂರು ಮೂಲದ ಮಂಜುಳಾ(28) ಮೃತ ಮಹಿಳೆ. ಬೆಂಗಳೂರಿನಿಂದ ಮೈಸೂರಿಗೆ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದಾಗ ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಿಪುರದಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ.
ಭಾನುವಾರ ಸ್ನೇಹಿತನೊಂದಿಗೆ ಬೆಂಗಳೂರಿನಿಂದ ಮೈಸೂರಿಗೆ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕೋಡಿಶೆಟ್ಟಿಪುರ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿ ಕುಳಿತ್ತಿದ್ದ ಮಂಜುಳಾ ಹಾರಿ ಪಕ್ಕದ ರಸ್ತೆ ಮೇಲೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಕಡೆಯಿಂದ ಬರುತ್ತಿದ್ದ ಎರ್ಟಿಗಾ ಕಾರು ಮಂಜುಳಾ ಮೇಲೆ ಹರಿದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜುಳಾರನ್ನು ಸ್ಥಳೀಯರ ನೆರವಿನಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರಾದ ಮಂಜುಳಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.