ಬೆಂಗಳೂರು: ಖಾಲಿ ಇರುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಇಬ್ಬರು ನಾಯಕರ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಅನರ್ಹ ಶಾಸಕ ಶಂಕರ್ ಮತ್ತು ಡಿಸಿಎಂ ಲಕ್ಷ್ಮಣ ಸವದಿ ನಡುವೆ ಪೈಪೋಟಿ ಏರ್ಪಟ್ಟಿದ್ದು, ಶತಾಯಗತಾಯ ಶಾಸಕರಾಗಲು ಕಸರತ್ತು ಪ್ರಾರಂಭ ಮಾಡಿದ್ದಾರೆ.
ಅನರ್ಹರಾಗಿ ಉಪಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರವನ್ನು ಬಿಜೆಪಿ ಸೂಚಿಸಿದ ಅಭ್ಯರ್ಥಿಗೆ ಆರ್.ಶಂಕರ್ ಬಿಟ್ಟುಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಶಂಕರ್ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಶಿವಾಜಿನಗರದಿಂದ ಆಯ್ಕೆ ಆಗಿರುವ ರಿಜ್ವಾನ್ ಅರ್ಷದ್ ಅವರಿಂದ ಖಾಲಿಯಾಗಿರುವ ಸ್ಥಾನವನ್ನು ನನಗೆ ನೀಡಿ ಎಂದು ಸಿಎಂಗೆ ಶಂಕರ್ ದುಂಬಾಲು ಬಿದ್ದಿದ್ದಾರೆ. ಸಿಎಂ ಅವರನ್ನು ಭೇಟಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಿ ಅಂತ ಆರ್. ಶಂಕರ್ ಒತ್ತಡ ಹಾಕಿದ್ದಾರೆ.
Advertisement
Advertisement
ಹೈಕಮಾಂಡ್ ಕೃಪಾಕಟಾಕ್ಷದಿಂದ ಡಿಸಿಎಂ ಸ್ಥಾನ ಗಿಟ್ಟಿಸಿಕೊಂಡ ಲಕ್ಷ್ಮಣ ಸವದಿ ಯಾವುದೇ ಮನೆಯ ಸದಸ್ಯರಲ್ಲ. ಈಗಾಗಲೇ ಬಹುತೇಕ 4 ತಿಂಗಳು ಕಳೆದು ಹೋಗಿದೆ. ಇನ್ನು ಎರಡು ತಿಂಗಳಲ್ಲಿ ಸವದಿ ಪರಿಷತ್ ಸದಸ್ಯರಾಗದೇ ಹೋದರೆ ಡಿಸಿಎಂ ಸ್ಥಾನ ಹೋಗುತ್ತದೆ. ಉಪ ಚುನಾವಣೆಯಲ್ಲಿ ಕೊಟ್ಟ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿರುವ ಸವದಿ, ಪರಿಷತ್ ಸದಸ್ಯರಾಗಿ ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ಸಿಎಂಗೆ ದುಂಬಾಲು ಬಿದ್ದಿದ್ದಾರೆ.
Advertisement
ಶಂಕರ್ ಮತ್ತು ಸವದಿ ಒತ್ತಡದಿಂದ ಸಿಎಂ ಅಕ್ಷರಶಃ ಗೊಂದಲಕ್ಕೆ ಒಳಗಾಗಿದ್ದಾರೆ. ಇರುವ ಒಂದು ಸ್ಥಾನ ಯಾರಿಗೆ ನೀಡುವುದು ಎಂದು ಸಿಎಂ ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ಜೂನ್ ನಲ್ಲಿ ಸುಮಾರು 7-8 ವಿಧಾನ ಪರಿಷತ್ ಸ್ಥಾನಗಳು ಖಾಲಿ ಆಗಲಿದೆ. ಹೀಗಾಗಿ ಈಗ ಒಬ್ಬರಿಗೆ ಕೊಟ್ಟು ಮುಂದಿನ ಜೂನ್ ವೇಳೆ ಇನ್ನೊಬ್ಬರಿಗೆ ನೀಡುವ ಚಿಂತನೆಯಲ್ಲಿ ಸಿಎಂ ಇದ್ದಾರೆ. ಯಾರಿಗೆ ಮೊದಲು ಕೊಡಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಲಿದೆ.