– ದೇಶದ ಒಟ್ಟು ಆರು ಕ್ಷೇತ್ರಗಳಲ್ಲೂ ಪುರುಷರಿಗೆ ನಿರ್ಬಂಧ
ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಕನಕದುರ್ಗ ಮತ್ತು ಬಿಂದು ಎಂಬ ಇಬ್ಬರು ಪ್ರವೇಶಿಸಿದ್ದಾರೆ. ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ದೇವರನಾಡಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾರತದ ಸಂಸ್ಕೃತಿಯಲ್ಲಿ ಕೆಲವು ದೇಗುಲಗಳ ಪ್ರವೇಶಕ್ಕೆ ನಿರ್ಬಂಧವಿದ್ದರೆ ಮತ್ತೆ ಕೆಲ ದೇವಸ್ಥಾನಗಳಿಗೆ ಪ್ರವೇಶ ನಿಷೇಧವಿದೆ.
ಈಗ ಲಿಂಗಸಮಾನತೆ ಕೇಳುವ ಕಾಲವಾಗಿದ್ದು, ಸುಪ್ರೀಂಕೋರ್ಟ್ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ತೀರ್ಪು ಪ್ರಕಟಿಸಿತ್ತು. ತೀರ್ಪು ಬಂದ ಬಳಿಕ ಅಯ್ಯಪ್ಪ ದೇಗುಲ ಪ್ರವೇಶಿಸಲು ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ, ತೃಪ್ತಿ ದೇಸಾಯಿ ಸೇರಿದಂತೆ ಹಲವರು ಪ್ರಯತ್ನಿಸಿ ವಿಫಲವಾಗಿದ್ದರು. ಕೊನೆಗೆ ಇಂದು ಕನಕದುರ್ಗ ಮತ್ತು ಬಿಂದು ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇದೇ ರೀತಿ ದೇಶದ ಕೆಲವು ದೇವಸ್ಥಾನಗಳಲ್ಲಿ ಪುರುಷರ ಅನುಮತಿಯನ್ನು ನಿಷೇಧಿಸಲಾಗಿದೆ. ಅಂತಹ ಎರಡು ದೇವಸ್ಥಾನದ ಕೇರಳದಲ್ಲಿಯೇ ಇದೆ. ಹಾಗಾದ್ರೆ ಆ ದೇವಸ್ಥಾನಗಳ ಮಾಹಿತಿ ಇಲ್ಲಿದೆ.
Advertisement
1. ಅತ್ತಕುಲ ಭಾಗ್ಯವತಿ ದೇವಾಲಯ:
ಇದು ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿದೆ. ಈ ದೇವಾಲಯದಲ್ಲಿ ಮಹಿಳೆಯರು ಅರ್ಚಕಿಯರಾಗಿದ್ದು, ಪುರುಷರಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ದೇವಸ್ಥಾನದ ಪೊಂಗಲ್ ಹಬ್ಬದಲ್ಲಿ 30 ಲಕ್ಷಕ್ಕೂ ಹೆಚ್ಚು ಮಹಿಳಾ ಭಕ್ತಾದಿಗಳು ಭಾಗಿಯಾಗಿ ಗಿನ್ನಿಸ್ ದಾಖಲೆಯನ್ನು ಸೇರಿತ್ತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳದಲ್ಲಿ 10 ದಿನ ಪೊಂಗಲ್ ಆಚರಿಸಲಾಗುತ್ತದೆ.
Advertisement
Advertisement
2. ಚಕ್ಕುಲತುಕವು ದೇವಾಲಯ:
ಈ ದೇವಾಲಯ ಕೇರಳದ ಅಲಪುಳಾ ಜಿಲ್ಲೆಯ ನಿರಟ್ಟಪುರಂ ಎಂಬಲ್ಲಿದೆ. ಇಲ್ಲಿ ದುರ್ಗಾ ಮಾತೆಯ ಪ್ರತಿರೂಪ ಭಾಗ್ಯವತಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿನಿತ್ಯ ಮಹಿಳಾ ಅರ್ಚಕಿಯರೇ ಪೂಜೆಯನ್ನು ಸಲ್ಲಿಸುತ್ತಾರೆ. ಇಲ್ಲಿ ಆಚರಿಸುವ ಸಂಪ್ರದಾಯವನ್ನು ನಾರಿ ಪೂಜೆ ಎಂದು ಕರೆಯಲಾಗುತ್ತದೆ. ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪೂಜೆಯಲ್ಲಿ ಪಾಲ್ಗೊಳ್ಳುವ ಮಹಿಳಾ ಭಕ್ತಾದಿಗಳು 10 ದಿನ ಉಪವಾಸ ವ್ರತ ಆಚರಿಸಬೇಕಾಗುತ್ತದೆ.
Advertisement
3. ಸಂತೋಷಿ ಮಾ ದೇವಾಲಯ:
ದೇಶದ ಹಲವೆಡೆ ಇರುವ ಸಂತೋಷಿ ಮಾ ದೇಗುಲಗಳಿಗೆ ಮಹಿಳೆಯರೇ ಅರ್ಚಕಿಯರು. ಪುರುಷರ ತಾಯಿಗೆ ಪೂಜೆ ಸಲ್ಲಿಸುವಂತಿಲ್ಲ. ಸಂತೋಷಿ ಮಾ ಮಹಿಳಾ ಭಕ್ತಾದಿಗಳನ್ನೇ ಹೊಂದಿದ್ದು, ಕನ್ಯೆಯರು ಮತ್ತು ಅಥವಾ ಮಹಿಳೆಯರು ಕಟ್ಟುನಿಟ್ಟಿನ ಸಂತೋಷಿ ಮಾ ವ್ರತ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ದೇಶದ ಐದು ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ
4. ಬ್ರಹ್ಮ ದೇವಾಲಯ:
ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯಕ್ಕೆ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ. ಇಲ್ಲಿ ಬ್ರಹ್ಮದೇವನನ್ನು ಪೂಜಿಸಲಾಗುತ್ತದೆ. ಕಾರ್ತಿಕ ಪೌರ್ಣಿಮ ದಿನ ಬ್ರಹ್ಮದೇವನಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ.
5. ಭಾಗತಿ ಮಾ ದೇವಾಲಯ:
ಭಾಗತಿ ಮಾ ದೇವಾಲಯ ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ. ಪಾರ್ವತಿ ದೇವಿ ಸಮುದ್ರದ ಮಧ್ಯೆ ಏಕಾಂಗಿಯಾಗಿ ಕುಳಿತು ಶಿವದೇವನೇ ನನ್ನ ಪತಿಯಾಗಬೇಕೆಂದು ಪಾರ್ವತಿ ದೇವಿ ಕಠಿಣ ತಪಸ್ಸು ಮಾಡಿದ್ದಳಂತೆ. ಹಾಗಾಗಿ ಭಾಗತಿ ದೇಗುಲಕ್ಕೆ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಇದನ್ನು ಕನ್ಯಾಕುಮಾರಿ ದೇಗುಲ ಅಂತಾನೂ ಕರೆಯಲಾಗುತ್ತದೆ. ಕನ್ಯಾ ಮಾ ಭಗವತಿ ದುರ್ಗಾ ತಾಯಿಗೆ ಮಹಿಳೆಯರೇ ಅರ್ಚಕಿಯರಾಗಿ ಪೂಜೆ ಸಲ್ಲಿಸುತ್ತಾರೆ.
6. ಮಾತಾ ದೇಗುಲ:
ಬಿಹಾರದ ಮುಜಫರ್ ನಗರದಲ್ಲಿ ಮಾತಾ ದೇವಸ್ಥಾನವಿದೆ. ಇಲ್ಲಿ ದೇಗುಲದ ಆವರಣದಲ್ಲಿಯೂ ಪುರುಷರು ಪ್ರವೇಶಿಸಬಾರದೆಂಬ ಕಠಿಣ ನಿಯಮವಿದೆ.
ಒಟ್ಟಿನಲ್ಲಿ ದೇಶದಲ್ಲಿ ಹೇಗೆ ಮಹಿಳೆಯರಿಗೆ ಕೆಲವು ದೇಗುಲಗಳಿಗೆ ಪ್ರವೇಶವಿಲ್ಲ. ಅಂತೆಯೇ ಕೆಲವು ಕಡೆ ಪುರುಷರಿಗೂ ಪ್ರವೇಶವಿಲ್ಲ. ಇಂದು ಶಬರಿಮಲೆ ದೇಗುಲವನ್ನು ಪ್ರವೇಶಿಸುವ ಮೂಲಕ 800 ವರ್ಷಗಳ ಇತಿಹಾಸಕ್ಕೆ ಇಬ್ಬರು ಬ್ರೇಕ್ ಕೊಟ್ಟಿದ್ದಾರೆ.
ಎಲ್ಲದರಲ್ಲೂ ಸಮಾನತೆಯನ್ನು ಕಾಣುವ ಕಾಲ ಇದಾಗಿದ್ದು, ಪ್ರವೇಶ ಮಾಡಬೇಕೇ ಅಥವಾ ಮಾಡಬಾರದೇ ಎನ್ನುವುದು ಜನರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ದೇವಸ್ಥಾನದ ಪ್ರವೇಶ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv