ಭಾರತದಲ್ಲಿ ನಾಯಿ ಕಡಿತದ (Dog Bite) ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಮಕ್ಕಳು, ವೃದ್ಧರು, ವಯಸ್ಕರು ಎನ್ನದೇ ನಾಯಿಗಳ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ರೇಬಿಸ್‌ನಿಂದ ಸಾಯುವವರ ಸಂಖ್ಯೆಯೂ ಏರುತ್ತಿರುವುದು ಆತಂಕ ಮೂಡಿಸಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ನ್ಯಾಯಾಲಯಗಳು ಎಚ್ಚರಿಸುತ್ತಿವೆ. ನಾಯಿಗಳ ಹಾವಳಿ ತಪ್ಪಿಸಲು ಸರ್ಕಾರಗಳು ಕೂಡ ಹಲವಾರು ಕ್ರಮಗಳನ್ನು ಕೈಗೊಂಡಿವೆ. ಮನೆ ಹೊರಾಂಗಣದಲ್ಲಿ ಆಟ ಆಡುವಾಗ ಮಕ್ಕಳು ಹೆಚ್ಚಾಗಿ ದಾಳಿಗೆ ಒಳಗಾಗುತ್ತಿರುವುದು ಕಳವಳ ಉಂಟು ಮಾಡಿದೆ. ಕೆಲವು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ. ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.
ದೇಶಾದ್ಯಂತ ನಾಯಿಗಳ ದಾಳಿ ಪ್ರಕರಣಗಳೆಷ್ಟು? ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ? ಸುಪ್ರೀಂ ಕೋರ್ಟ್ ಸೂಚನೆ ಏನು? ನಾಯಿಗಳ ಹಾವಳಿ ತಪ್ಪಿಸಲು ಸರ್ಕಾರಗಳು ಕೈಗೊಂಡ ಕ್ರಮಗಳೇನು? ಇಲ್ಲಿದೆ ವಿವರ. ಇದನ್ನೂ ಓದಿ: ಬೆಂಗಳೂರಲ್ಲಿ ಬೀದಿ ನಾಯಿಗಳ ದಾಳಿಗೆ ವೃದ್ಧ ಬಲಿ?
ದೇಶದಲ್ಲಿ 37 ಲಕ್ಷ ನಾಯಿ ಕಡಿತ
2024 ರಲ್ಲಿ 37 ಲಕ್ಷ ಹೆಚ್ಚು ನಾಯಿ ಕಡಿತ ಪ್ರಕರಣಗಳು ಹಾಗೂ ರೇಬಿಸ್‌ನಿಂದ 54 ಸಾವುಗಳು ವರದಿಯಾಗಿವೆ. ರಾಷ್ಟ್ರೀಯ ರೇಬಿಸ್ (Rabies) ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸಂಗ್ರಹಿಸಿದ ಅಂಕಿಅಂಶ ಇದಾಗಿದ್ದು, ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲಾಗಿ ಪರಿಣಮಿಸಿದೆ. 2022 ಮತ್ತು 2024 ರ ನಡುವೆ ಭಾರತದಲ್ಲಿ ನಾಯಿ ಕಡಿತದ ಘಟನೆಗಳು ಸುಮಾರು ಶೇ.70 ರಷ್ಟು ಹೆಚ್ಚಾಗಿದೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸುವಲ್ಲಿ ವ್ಯವಸ್ಥಿತ ವೈಫಲ್ಯ ಇದಾಗಿದೆ. ಈ ಅವಧಿಯಲ್ಲಿ ರೇಬಿಸ್‌ನಿಂದ ಉಂಟಾದ ಸಾವುಗಳು ಸಹ ತೀವ್ರ ಏರಿಕೆಯನ್ನು ಕಂಡಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, 2030ರ ಹೊತ್ತಿಗೆ ಸಂಪೂರ್ಣವಾಗಿ ರೇಬಿಸ್ ನಿರ್ಮೂಲನೆ ಮಾಡುವ ಗುರಿ ಹೊಂದಿದೆ.
ವೃದ್ಧರು, ಮಕ್ಕಳೇ ಹೆಚ್ಚು
ಬೀದಿ ನಾಯಿಗಳ (Stray Dogs) ದಾಳಿಗೆ ವೃದ್ಧರು ಮತ್ತು ಮಕ್ಕಳೇ ಹೆಚ್ಚು ತುತ್ತಾಗುತ್ತಿದ್ದಾರೆ. ದೈಹಿಕ ಸಾಮರ್ಥ್ಯ, ಮುನ್ನೆಚ್ಚರಿಕೆ, ಅರಿವಿನ ಕೊರತೆ ಕಾರಣದಿಂದ ದಾಳಿಗೆ ತುತ್ತಾಗುತ್ತಾರೆ. ಚಿಕ್ಕ ಮಕ್ಕಳಿಗೆ ನಾಯಿಗಳು ತಲೆ, ಕುತ್ತಿಗೆ ಅಥವಾ ಮುಖಕ್ಕೆ ಕಚ್ಚುವ ಸಾಧ್ಯತೆ ಹೆಚ್ಚು. ಇದರಿಂದ ಗಾಯಗಳು ಹೆಚ್ಚು ತೀವ್ರ ಮತ್ತು ಆಘಾತಕಾರಿಯಾಗಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, 2024 ರ ಜನವರಿ ಮತ್ತು ಡಿಸೆಂಬರ್ ನಡುವೆ ಭಾರತದಾದ್ಯಂತ ನಾಯಿಗಳ ದಾಳಿಗೆ ಒಳಗಾದವರಲ್ಲಿ 15 ವರ್ಷದೊಳಗಿನ ಮಕ್ಕಳೇ ಹೆಚ್ಚಿದ್ದಾರೆ. ಮನೆಯ ನೆರೆಹೊರೆ, ಶಾಲಾ ವಲಯ ಅಥವಾ ಹೊರಾಂಗಣದಲ್ಲಿ ಆಟವಾಡುವಾಗ ಬೀದಿ ನಾಯಿಗಳ ದಾಳಿ ಹೆಚ್ಚು ನಡೆದಿವೆ. ಇದನ್ನೂ ಓದಿ: ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ: ಬಿಬಿಎಂಪಿ ಸ್ಪಷ್ಟನೆ
ದೈಹಿಕ ದುರ್ಬಲತೆ, ದೃಷ್ಟಿ ಸಮಸ್ಯೆ, ಶ್ರವಣ ದೋಷ ಕಾರಣಕ್ಕೆ ವಯಸ್ಸಾದವರು ನಾಯಿ ಕಡಿತಕ್ಕೆ ಗುರಿಯಾಗುತ್ತಾರೆ. ಬೀದಿ ಪ್ರಾಣಿಗಳ ಆಕ್ರಮಣವನ್ನು ಮೊದಲೇ ಅರಿಯಲು ಅಥವಾ ದಾಳಿಯಿಂದ ತಪ್ಪಿಸಿಕೊಳ್ಳಲು ತಕ್ಕ ಪ್ರತಿಕ್ರಿಯೆ ನೀಡುವುದು ಅವರಿಂದ ಕಷ್ಟವಾಗುತ್ತದೆ. ವಾಕಿಂಗ್ ಏಡ್‌ಗಳ ಬಳಕೆಯು ಬೀದಿ ನಾಯಿಗಳನ್ನು ಬೆದರಿಸಲು ಸಹಾಯಕವಾಗಬಹುದು. ಆದರೆ, ಆರೋಗ್ಯ ಪರಿಸ್ಥಿತಿ ಹಾಗೂ ರೋಗನಿರೋಧಕ ಶಕ್ತಿ ಕೊರತೆಯು ವೃದ್ಧರಿಗೆ ಸಣ್ಣ ಪ್ರಮಾಣದ ನಾಯಿ ಕಡಿತ ಕೂಡ ಗಂಭೀರವಾಗಿ ಪರಿಣಮಿಸಬಹುದು. ದಾಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ವೃದ್ಧರಲ್ಲಿ ಇರುವುದಿಲ್ಲ. ಹೀಗಾಗಿ, ಇವರು ಕೂಡ ಹೆಚ್ಚಿನ ದಾಳಿಗಳಿಗೆ ಒಳಗಾಗುತ್ತಾರೆ.
ರೇಬಿಸ್ ಆತಂಕ
ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲಿ ರೇಬಿಸ್ ಕೂಡ ಒಂದು. ನಾಯಿ ಕಡಿತವೇ ರೇಬಿಸ್‌ಗೆ ಮೂಲ ಕಾರಣ. ಒಮ್ಮೆ ರೇಬಿಸ್ ತಗುಲಿದರೆ, ಗುಣವಾಗಲ್ಲ. ರೇಬಿಸ್‌ನಿಂದ ಜಾಗತಿಕವಾಗಿ ಪ್ರತಿವರ್ಷ ಸುಮಾರು 50 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತವು ಜಾಗತಿಕ ರೇಬಿಸ್ ಸಾವುಗಳಲ್ಲಿ 36% ರಷ್ಟನ್ನು ಹೊಂದಿದೆ. 2023 ರಲ್ಲಿ ದೇಶದಲ್ಲಿ ನಾಯಿ ಕಡಿತದಿಂದ 286 ಸಾವುಗಳಾಗಿವೆ. 2024 ರಲ್ಲಿ 48 ರೇಬಿಸ್ ಸಾವುಗಳು ವರದಿಯಾಗಿವೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 18,000 ರಿಂದ 20,000 ಜನರು ರೇಬಿಸ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಇದು ಹೆಚ್ಚಾಗಿ ನಾಯಿ ಕಡಿತದಿಂದ ಉಂಟಾಗುತ್ತಿದೆ. ಕೆಲವೊಮ್ಮೆ ಬೆಕ್ಕು ಕಡಿತದಿಂದಲೂ ರೇಬಿಸ್ ಸೋಂಕು ಹರಡುವ ಅಪಾಯವಿದೆ.
ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ?
ಕಳೆದ ಆರು ತಿಂಗಳಲ್ಲಿ ಕರ್ನಾಟಕದಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬಿಸ್ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ. 2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IಆSP) ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರ ಪೈಕಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಸಾವುಗಳು ವರದಿಯಾಗಿದ್ದವು. ಇದನ್ನೂ ಓದಿ: ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್
ವಿಜಯಪುರದಲ್ಲಿ ಅತಿ ಹೆಚ್ಚು ಕೇಸ್
ವಿಜಯಪುರದಲ್ಲಿ ಅತಿ ಹೆಚ್ಚು ನಾಯಿ ಕಡಿತದ ಪ್ರಕರಣಗಳು (15,527) ವರದಿಯಾಗಿವೆ. ನಂತರ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ 13,831 ಕೇಸ್, ಹಾಸನ (13,388), ದಕ್ಷಿಣ ಕನ್ನಡ (12,524), ಮತ್ತು ಬಾಗಲಕೋಟೆ (12,392) ದಾಖಲಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ 4,408 ಹಾಗೂ ಬೆಂಗಳೂರು ನಗರವು 8,878 ಪ್ರಕರಣಗಳನ್ನು ವರದಿ ಮಾಡಿದೆ. ಗಮನಾರ್ಹವಾಗಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಥವಾ ಬೆಂಗಳೂರು ಗ್ರಾಮಾಂತರದಲ್ಲಿ ಯಾವುದೇ ರೇಬಿಸ್ ಸಾವುಗಳು ವರದಿಯಾಗಿಲ್ಲ. ಯಾದಗಿರಿ (1,132), ಚಾಮರಾಜನಗರ (1,810) ಮತ್ತು ಕೊಡಗು (2,523) ನಲ್ಲಿ ನಾಯಿ ಕಡಿತದ ಪ್ರಕರಣಗಳು ಕಡಿಮೆ ವರದಿಯಾಗಿವೆ.
ಬೆಂಗಳೂರಲ್ಲಿ ನಾಯಿ ಕಡಿತಕ್ಕೆ ವೃದ್ಧ ಬಲಿ
ಈಚೆಗೆ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ 71 ವರ್ಷದ ಸೀತಪ್ಪ ಎಂಬವರು ಮೃತಪಟ್ಟಿದ್ದಾರೆ. ಸೀತಪ್ಪ ಅವರು ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದಾಗ 8ರಿಂದ 9 ಬೀದಿನಾಯಿಗಳು ದಾಳಿ ಮಾಡಿವೆ. ಕೈ, ಕಾಲಿನ ಅರ್ಧ ಮಾಂಸವನ್ನೇ ಕಚ್ಚಿ ತಿಂದಿವೆ. ಅಷ್ಟೇ ಅಲ್ಲದೇ, ಮುಖಕ್ಕೂ ಕಚ್ಚಿವೆ. ನಾಯಿಗಳ ದಾಳಿಗೆ ವೃದ್ಧ ಬಲಿಯಾಗಿದ್ದಾರೆ. ಮೃತರ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಬಿಬಿಎಂಪಿ ಘೋಷಿಸಿದೆ. ಬೀದಿನಾಯಿಗಳ ಸಂತಾನೋತ್ಪತ್ತಿ ಹೆಚ್ಚಳವಾಗಿರುವುದು ಇಂತಹ ಪ್ರಕರಣಗಳಿಗೆ ಕಾರಣವಾಗಿದೆ. ಬೀದಿ ನಾಯಿಗಳ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ನಾಯಿ ಕಡಿತ ನಿಯಂತ್ರಣ ಹೇಗೆ?
ಜಾಗೃತಿ ಮೂಡಿಸುವುದು, ನಾಯಿ ಕಡಿತಕ್ಕೆ ಒಳಗಾದವರಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ತರಬೇತಿ ನೀಡುವುದು, ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸಲು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಆಡಳಿತಗಳಿಗೆ ಸೂಚನೆ ನೀಡುವುದರಿಂದ ನಿಯಂತ್ರಣ ಸಾಧ್ಯವಾಗುತ್ತದೆ. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕು. ರೇಬಿಸ್ ಹರಡುವಿಕೆಯನ್ನು ತಡೆಗಟ್ಟಲು ನಿಯಮಿತವಾಗಿ ಲಸಿಕೆ ಹಾಕಬೇಕು.
ರೇಬಿಸ್‌ಗೆ ಬೆಂಗಳೂರಲ್ಲೇ ಹೆಚ್ಚು ಸಾವು
ಈ ವರ್ಷದ ಜನವರಿ ಮತ್ತು ಜೂನ್ ನಡುವೆ ವರದಿಯಾದ 19 ರೇಬಿಸ್ ಸಾವುಗಳಲ್ಲಿ, ಬೆಂಗಳೂರು ನಗರವು ಅತಿ ಹೆಚ್ಚು ಒಂಬತ್ತು ಪ್ರಕರಣಗಳನ್ನು ಹೊಂದಿದೆ. ನಂತರ ಬೆಳಗಾವಿ ಐದು, ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಸಾವು ವರದಿಯಾಗಿದೆ. ಪ್ರತಿ ಬೀದಿ ನಾಯಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಲಸಿಕೆ ಹಾಕುವುದು ಪ್ರಮುಖ ಪ್ರಾಯೋಗಿಕ ಸವಾಲಾಗಿದೆ. ರೋಗಿಗಳು ಚಿಕಿತ್ಸೆ ಪಡೆಯಲು ವಿಳಂಬ ಮಾಡಿದ್ದರಿಂದ ಸಾವಾಗಿರುವುದು ತಿಳಿದುಬಂದಿದೆ.