ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty), ಮೊನ್ನೆಯಷ್ಟೇ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಇನ್ಮುಂದೆ ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡಿ. ನಾನು ಬರೋದಿಲ್ಲ. ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ’ ಎಂದಿದ್ದರು. ಅಲ್ಲಿಗೆ ಅತೀ ಶೀಘ್ರದಲ್ಲೇ ಸಿನಿಮಾ ಟೀಮ್ ಚಿತ್ರೀಕರಣಕ್ಕೆ ಹೊರಡಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ಇದೀಗ ಮತ್ತೊಂದ ಮಾಹಿತಿ ಹೊರ ಬಿದ್ದಿದ್ದು, ರಿಷಬ್ ಈ ಸಿನಿಮಾಗಾಗಿ ತಮ್ಮ ಲುಕ್ ಅನ್ನೇ ಬದಲಾಯಿಸಿಕೊಂಡಿದ್ದಾರೆ.
ದೀಪಾವಳಿ ದಿನದಂದು ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡಿರುವ ರಿಷಬ್, ಆ ಫೋಟೋಗಳಲ್ಲಿ ಅವರು ಲುಕ್ ಬದಲಾಗಿದೆ. ಇದು ಚಿತ್ರಕ್ಕಾಗಿ ಮಾಡಿಕೊಂಡ ಸಿದ್ಧತೆ ಎಂದು ಹೇಳಲಾಗುತ್ತಿದೆ. ತಲೆಗೂದಲು ಮತ್ತು ಗಡ್ಡವನ್ನು ಅಪಾರ ಪ್ರಮಾಣದಲ್ಲಿ ರಿಷಬ್ ಬೆಳೆಸಿದ್ದಾರೆ. ಈ ಮೂಲಕ ಪಾತ್ರ ಇನ್ನೂ ಮಜವಾಗಿ ಇರಲಿದೆ ಎನ್ನುವ ಸಂದೇಶ ಸಾರಿದ್ದಾರೆ.
‘ಕಾಂತಾರ 2’ ಸಿನಿಮಾದ ಶೂಟಿಂಗ್ (Shooting) ಯಾವಾಗಿಂದ ಶುರುವಾಗಬಹುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣಕ್ಕೆ ಹೋಗುವುದಾಗಿ ರಿಷಬ್ ತಿಳಿಸಿದ್ದಾರೆ. ಸ್ಕ್ರಿಪ್ಟ್ ಮತ್ತು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ರಿಷಬ್ ಸದ್ಯ ಬ್ಯುಸಿಯಾಗಿದ್ದಾರೆ.
ಸಿನಿಮಾ ಶೂಟಿಂಗ್ ಗಾಗಿ ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ ರಿಷಬ್. ಕಾಂತಾರ ಸಿನಿಮಾ ಕೇವಲ ಅವರ ಊರಿನಲ್ಲಿ ಮಾತ್ರ ಚಿತ್ರೀಕರಣವಾಗಿತ್ತು. ಈ ಬಾರಿ ಅವರ ಊರಿನ ಜೊತೆಗೆ ನಾನಾ ಸ್ಥಳಗಳಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ. ಈಗಾಗಲೇ ಆ ಸ್ಥಳಗಳನ್ನು ಅವರು ನೋಡಿಕೊಂಡೂ ಬಂದಿದ್ದಾರೆ ಎನ್ನುವುದು ಸದ್ಯದ ವರ್ತಮಾನ. ಕಥೆಗೆ ತಕ್ಕಂತೆ ಬಜೆಟ್ ಖರ್ಚು ಮಾಡುವ ಕುರಿತಾಗಿಯೂ ಅವರು ಮಾತನಾಡಿದ್ದಾರೆ.
‘ಕಾಂತಾರ 2’ (Kantara 2) ಸಿನಿಮಾದ ಬಜೆಟ್ (Budget) ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕಾಂತಾರ ಸಿನಿಮಾದ ಬಜೆಟ್ ಗಿಂತ ಎರಡ್ಮೂರು ಪಟ್ಟು ಹೆಚ್ಚಿನ ಬಜೆಟ್ ಬೇಡುವಂತಹ ಚಿತ್ರ ಇದಾಗಲಿದೆ ಎಂದು ಹೇಳಲಾಗಿತ್ತು. ಆದರೆ, ನಿಜವಾದ ಬಜೆಟ್ ಅನ್ನು ರಾಜ್ ಬಿ ಶೆಟ್ಟಿ (Raj B Shetty) ಬಾಯ್ಬಿಟ್ಟಿದ್ದಾರೆ.
ಸದ್ಯ ರಾಜ್ ಬಿ ಶೆಟ್ಟಿ ಅವರ ಟೋಬಿ ಸಿನಿಮಾ ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಕೇರಳದಲ್ಲಿ ಅವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಮಾಧ್ಯಮವೊಂದರ ಜೊತೆ ಮಾತನಾಡಿರುವ ರಾಜ್ ಬಿ ಶೆಟ್ಟಿ ಕಾಂತಾರ 2 ಸಿನಿಮಾದ ಅಂದಾಜು ಬಜೆಟ್ ಅನ್ನು ಹೇಳಿಕೊಂಡಿದ್ದಾರೆ. ಇದು ನೂರು ಕೋಟಿ ಬೇಡುವಂತಹ ಚಿತ್ರ ಎಂದು ಮಾತನಾಡಿದ್ದಾರೆ.
ಕಾಂತಾರ 2 ಸಿನಿಮಾ ಸ್ಕ್ರಿಪ್ಟ್ ಹಂತದಲ್ಲಿದೆ. ಇದು ನೂರಾರು ಕೋಟಿ ಬಜೆಟ್ ನಲ್ಲಿ ತಯಾರಾಗುವಂತಹ ಬಿಗ್ ಬಜೆಟ್ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲಿಗೆ ಕಾಂತಾರ 2 ಸಿನಿಮಾದ ಬಜೆಟ್ ಬಹಿರಂಗವಾಗಿದೆ. ಇದರ ಜೊತೆಗೆ ಚಾರ್ಲಿ ಸಿನಿಮಾದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು, ಚಾರ್ಲಿ 2 ಸಿನಿಮಾ ಬರುವುದಕ್ಕೆ ಸಾಧ್ಯವೆ ಇಲ್ಲ. ನಿರ್ದೇಶಕರು ಬೇರೆ ಕಥೆಯಲ್ಲಿ ಮಗ್ನರಾಗಿದ್ದಾರೆ ಎಂದಿದ್ದಾರೆ.