ರಿಷಭ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ – ಪಂತ್‌ ಒಂದು ಪಂದ್ಯದಿಂದ ಅಮಾನತು!

Public TV
3 Min Read
Rishabh Pant

– ಪ್ಲೇ ಆಫ್‌ ಸಮೀಪದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರೀ ಆಘಾತ

ನವದೆಹಲಿ: ಮೂರು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್‌ನಿಂದ (Slow Over Rate) ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್‌ ಪಂತ್‌ಗೆ (Rishabh Pant) ಐಪಿಎಲ್‌ ಮಂಡಳಿ ಬರೋಬ್ಬರಿ 30 ಲಕ್ಷ ರೂ. ದಂಡ ವಿಧಿಸಿದೆ. ಇದರೊಂದಿಗೆ ಒಂದು ಪಂದ್ಯದಿಂದ ರಿಷಭ್‌ ಪಂತ್‌ ಅವರನ್ನ ಅಮಾನತು ಮಾಡಲಾಗಿದೆ.

Rishabh Pant 2

ಸದ್ಯ 12 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ ಪ್ಲೇ ಆಫ್‌ ಪ್ರವೇಶಿಸುವ ಸಮೀಪದಲ್ಲಿದೆ. ಮುಂದಿನ ಎರಡೂ ಪಂದ್ಯಗಳೂ ಡೆಲ್ಲಿ ತಂಡಕ್ಕೆ ನಿರ್ಣಾಯಕವಾಗಿದೆ. ಇಂತಹ ಹೊತ್ತಿನಲ್ಲೇ ನಾಯಕ ರಿಷಭ್‌ ಪಂತ್‌ ಅವರನ್ನ ಅಮಾನತುಗೊಳಿಸಿರುವುದು ಡೆಲ್ಲಿ ತಂಡಕ್ಕೆ ಭಾರೀ ಆಘಾತ ನೀಡಿದೆ. ಸೂಪರ್‌ ಸಂಡೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆರ್‌ಸಿಬಿ ವಿರುದ್ಧ ಸೆಣಸಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಒಂದು ವೇಳೆ ಈ ಪಂದ್ಯಕ್ಕೆ ಪಂತ್‌ ಗೈರಾದರೆ, ಆರ್‌ಸಿಬಿಗೆ (RCB) ಇದು ವರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: IPL 2024: ಗೆದ್ದರೂ ಖುಷಿಯಿಲ್ಲ – ಶತಕ ಸಿಡಿಸಿ ಮೆರೆದಾಡಿದ ಗಿಲ್‌ಗೆ 24 ಲಕ್ಷ ರೂ. ದಂಡ!

IPL 2024 delhi capitals beat rajasthan royals by 20 runs

ದಂಡ ವಿಧಿಸಿದ್ದು ಏಕೆ?
ಮೇ 7 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley Stadium) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಧಾನಗತಿಯ ಬೌಲಿಂಗ್‌ ನಡೆಸಿತ್ತು. ಇದಕ್ಕಾಗಿ ಪಂತ್‌ ಅವರಿಗೆ 30 ಲಕ್ಷ ರೂ. ದಂಡದೊಂದಿಗೆ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಉಳಿದ 11 ಸದಸ್ಯರಿಗೆ ತಲಾ 12 ಲಕ್ಷ ರೂ. ಅಥವಾ ಆಯಾ ಪಂದ್ಯ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್‌ ಮಂಡಳಿ ತಿಳಿಸಿದೆ.

IPL 2022 RR VS DC

30 ಲಕ್ಷ ದಂಡ ಯಾಕೆ?
ಐಪಿಎಲ್‌ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. 2ನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ. 3ನೇ ಬಾರಿಗೆ ದಂಡ ವಿಧಿಸಿದರೆ 30 ಲಕ್ಷ ದಂಡದೊಂದಿಗೆ ಒಂದು ಪಂದ್ಯದಿಂದ ನಾಯಕನನ್ನು ಅಮಾನತುಗೊಳಿಸಲಾಗುತ್ತದೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

RCB

ಪಂದ್ಯಕ್ಕೆ ಮೀಸಲಾದ ಸಮಯ ಎಷ್ಟು?
ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. 2ನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

ದಂಡ ಯಾಕೆ?
ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ.

ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ. ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ದೇವರ ದಾಖಲೆ ಮುರಿದ ಸಾಯಿ ಸುದರ್ಶನ್!

Share This Article