ಮಂಗಳೂರು: ಹಿರಿಯರು ಹೇಳಿದ ಉಪದೇಶದ ರೀತಿಯಲ್ಲಿ ದೈವ ನರ್ತನ ಮಾಡಿದ್ದೇನೆ ಎಂದು ದೈವ ನರ್ತಕ ಮುಖೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನ (Mangaluru) ಬಾರೆಬೈಲ್ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ನೀಡಿದ ಹರಕೆ ನೇಮೋತ್ಸವ ವಿವಾದದ ಬಗ್ಗೆ ಮಾತನಾಡಿದ ಅವರು, ನನಗೆ ಮಾಧ್ಯಮ, ಕೋರ್ಟ್, ಕಚೇರಿ ಎಲ್ಲವು ದೈವವೇ. ನಾನು ಇರುವುದು ಬಾಡಿಗೆ ಮನೆಯಲ್ಲಿ. ಹಿರಿಯರು ಹೇಳಿದ ಉಪದೇಶದ ರೀತಿಯಲ್ಲಿ ದೈವ ನರ್ತನ ಮಾಡಿದ್ದೇವೆ ಅಂದಿದ್ದಾರೆ.ಇದನ್ನೂ ಓದಿ: ಸಂಪ್ರದಾಯ ಮೀರಿ ನಡೀತಾ ಹರಕೆ ನೇಮೋತ್ಸವ? – ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಅಪಸ್ವರ
ಇನ್ನು ಈ ಕುರಿತು ದೈವಸ್ಥಾನದ ಗೌರವಾಧ್ಯಕ್ಷ ರವಿ ಪ್ರಸನ್ನ ಅವರು ಮಾತನಾಡಿ, ರಿಷಬ್ ಶೆಟ್ಟಿ ನೀಡಿದ ಹರಕೆ ನೇಮೋತ್ಸವವನ್ನು ದೈವಗಳು ಒಳ್ಳೆಯ ರೀತಿಯಲ್ಲಿ ಸ್ವೀಕಾರ ಮಾಡಿದೆ. ಈ ಕ್ಷೇತ್ರ ಬೆಳಗಬಾರದು ಎಂದು ಈಗ ವಿವಾದ ಹುಟ್ಟು ಹಾಕಲಾಗಿದೆ. ನಮಗೆ ನಮ್ಮ ದೈವ ನರ್ತಕರ ಮೇಲೆ ಯಾವುದೇ ಸಂಶಯ ಇಲ್ಲ. ಪ್ರತಿ ವರ್ಷದ ಎಣ್ಣೆಬೂಳ್ಯದ ರೀತಿಯಲ್ಲೇ ರಿಷಬ್ ಶೆಟ್ಟಿಯವರು ನೀಡಿದ ಹರಕೆ ನೇಮೋತ್ಸವವೂ ನಡೆದಿದೆ. ಕಳೆದ ವರ್ಷ ಮಗನ ಹುಟ್ಟುಹಬ್ಬದ ಹಿನ್ನೆಲೆ ಸೇವೆ ಕೊಟ್ಟಿದ್ದರು. ಎಲ್ಲಿಯೂ ನಡೆಯದ ಚಮತ್ಕಾರ ಈ ಕ್ಷೇತ್ರದಲ್ಲಿ ಆಗಿದೆ ಎಂದು ರಿಷಬ್ ಹೇಳಿಕೊಂಡಿದ್ದರು. ದೀಪಾವಳಿ ಸಂದರ್ಭದಲ್ಲಿ ದೈವದ ಅನುಮತಿ ಕೇಳಿ ಹರಕೆ ನೇಮಕ್ಕೆ ಒಪ್ಪಿಗೆ ಪಡೆಯಲಾಯಿತು. ಪಂಜುರ್ಲಿ ನೇಮ, ಜಾರಂದಾಯಗೆ ತುಡರ ಬಲಿ ನೀಡಲು ದೈವ ಒಪ್ಪಿಗೆ ನೀಡಿತು. ನಮ್ಮ ದೈವ ಅಪವಾದದಿಂದ ಮುಕ್ತ ಇದೆ. ದೈವಸ್ಥಾನದ ಕಟ್ಟುಕಟ್ಟಳೆ ಪ್ರಕಾರ ನಾವು ನಡೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಆಗೋ ಚರ್ಚೆಗೆ ದೈವಗಳೇ ಉತ್ತರ ನೀಡುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿವಾದ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ದೈವದ ಅವಹೇಳನ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ – ರಿಷಬ್‌ಗೆ ಪಂಜುರ್ಲಿ ಅಭಯ

