ಬೆಂಗಳೂರು: `ಕಿರಿಕ್ ಪಾರ್ಟಿ’ ಭರ್ಜರಿ ಯಶಸ್ಸಿನ ಬಳಿಕ ನಟ ನಿರ್ದೇಶಕ ರಿಷಬ್ ಶೆಟ್ಟಿ ಈಗ ತಮ್ಮ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಡೆ ಮುಖ ಮಾಡಿದ್ದಾರೆ. ಅಂದರೆ ಎಲ್ಲರಿಗೂ ತಿಳಿದಿರುವಂತೆ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ವೇಳೆ ಸಿನಿಮಾ ಕುರಿತು ರಿಷಬ್ ಶೆಟ್ಟಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ.
ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ ಸಿನಿಮಾ ತಮಗೇ ಹೊಸ ಚೈತನ್ಯ ನೀಡಿದೆ. `ರಿಕ್ಕಿ’ ಸಿನಿಮಾ ಮೊದಲ ಹಂತ ಮುಕ್ತಾಯವಾದ ಬಳಿಕ ಮಕ್ಕಳ ಕುರಿತು ಸಿನಿಮಾ ಮಾಡುವ ಯೋಚನೆ ಬಂತು. ಕನ್ನಡದಲ್ಲಿ ಸರ್ಕಾರಿ ಶಾಲೆ ಕುರಿತು ಕಡಿಮೆ ಸಿನಿಮಾಗಳು ಮೂಡಿ ಬಂದಿದೆ. ಅದ್ದರಿಂದ ನಾನು ಈ ಯೋಜನೆಗೆ ಕೈ ಹಾಕಿದೆ. ಕನ್ನಡದಲ್ಲೂ ಇಂತಹ ಪ್ರಯೋಗ ಕಡಿಮೆ ಇದೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ, ಮೂಲಭೂತ ಸೌಲಭ್ಯಗಳು ಹಾಗೂ ಶಿಕ್ಷಕರ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ 500ಕ್ಕೂ ಶಾಲೆಗಳನ್ನ ಮುಚ್ಚುತ್ತಿದ್ದಾರೆ. ಆದರೆ ಶಿಕ್ಷಣ ಮಕ್ಕಳ ಹಕ್ಕು. ಇದನ್ನು ತಿಳಿಸಲು ತಮ್ಮ ಬಾಲ್ಯದ ನೆನಪುಗಳಿಂದ ಸ್ಫೂರ್ತಿ ಪಡೆದು ಚಿತ್ರ ಮಾಡಿದ್ದೇನೆ. ಆದರೆ ಇದು ನಮ್ಮ ಬಯೋಗ್ರಫಿ ಅಲ್ಲ ಎಂದು ನಗೆ ಬೀರಿದರು.
Advertisement
Advertisement
ತಾನು ಸಹ ಪ್ರಾಥಮಿಕ ಶಾಲೆಯಲ್ಲಿ ಫೇಲ್ ಆಗಿದ್ದು, ನನ್ನ ಅಣ್ಣ ಸಹ ಐದು ಬಾರಿ ಫೇಲ್ ಆಗಿದ್ದ. ಅದ್ದರಿಂದ ಚಿತ್ರದಲ್ಲಿ ಪ್ರವೀಣ್ ಹೆಸರನ್ನು ಬಳಸಲಾಗಿದೆ. `ಪ್ರವೀಣ್ ದಡ್ಡ ದಡ್ಡ’ ಎಂದು ಪೋಷಕರು, ಶಿಕ್ಷಕರು ಸಹ ಹೆಚ್ಚು ಬೈಯುತ್ತಿದ್ದರು. ಇದನ್ನೇ ಸಿನಿಮಾದಲ್ಲೂ ಬಳಸಲಾಗಿದೆ. ಚಿತ್ರದಲ್ಲಿ ಹಾಡು, ಮಕ್ಕಳ ತಮಾಷೆ ಎಲ್ಲವೂ ಒಳಗೊಂಡಿದೆ. ಮಕ್ಕಳೊಂದಿಗೆ ಸೇರಿ ಸಿನಿಮಾ ಮಾಡಿದ್ದು, ಬಹಳ ಖುಷಿ ಕೊಟ್ಟಿದೆ. `ಕಿರಿಕ್ ಪಾರ್ಟಿ’ ಕಾಲೇಜು ಯುವಕರ ಕುರಿತ ಸಿನಿಮಾವಾದರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕುರಿತು ಮೂಡಿ ಬಂದಿದ್ದು, ಚಿತ್ರ ಕಮರ್ಷಿಯಲ್ ಆಗಿದ್ದು, ಉತ್ತಮ ಸಂದೇಶವನ್ನು ನೀಡುತ್ತದೆ ಎಂದರು.
Advertisement
ಚಿತ್ರ ಕಥೆ ಬೆಳೆಯುತ್ತಿದ್ದಂತೆಯೇ ಅನಂತ್ ನಾಗ್ ಸರ್, ಅವರ ಪಾತ್ರ ಹುಟ್ಟಿಕೊಂಡಿತ್ತು. ಅನಂತ್ ಸರ್ ಅವರೊಂದಿಗೆ ಕೆಲಸ ಮಾಡಿದ್ದು, ಅದ್ಭುತವಾದ ಅನುಭವ. ಅವರು ಮಕ್ಕಳೊಂದಿಗೆ ಇದ್ದ ರೀತಿ, ಅವರ ಎನರ್ಜಿ ಹಾಗೂ ನಡೆ ನಮಗೇ ಸಾಕಷ್ಟು ಬಾರಿ ಹೆಚ್ಚು ಅವಧಿ ಕಾರ್ಯನಿರ್ವಹಿಸಲು ಸ್ಫೂರ್ತಿ ನೀಡಿದೆ. ಚಿತ್ರದಲ್ಲಿ ಅನಂತ್ ನಾಗ್ ಅವರ ಪಾತ್ರವೂ ಹೆಚ್ಚು ತುಂಟಾಟದಿಂದ ಇದ್ದು, ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ 15.24 ನಿಮಿಷಗಳ ಒಂದೇ ಹಂತದ ಶಾಟ್ ಅನಂತ್ ಸರ್ ನಟಿಸಬೇಕಿತ್ತು. ಇದು ಚಿತ್ರಕ್ಕೆ ಬಹಳ ಮುಖ್ಯ ಹಾಗೂ ಅನಿವಾರ್ಯವಿತ್ತು. ಏಕೆಂದರೆ ಇದು ಸಿನಿಮಾದ ಪ್ರಮುಖ ಭಾಗವಾಗಿತ್ತು. ಈ ಕುರಿತು ಅವರೊಂದಿಗೆ ಹೇಳಿದ ತಕ್ಷಣ ಅವರು ಸ್ಕ್ರಿಪ್ಟ್ ಪಡೆದು ಓಕೆ ಎಂದರು. ಶಾಟ್ ವೇಳೆ ಅವರ ಎನರ್ಜಿ ಡ್ರಾಪ್ ಆಗುವುದೇ ಇಲ್ಲ. ಅವರಿಗೆ ವಯಸ್ಸಾಗಿದೆ ಎಂದು ಯಾರು ಹೇಳುವುದಿಲ್ಲ. ಈ ಸನ್ನಿವೇಶ ಅಷ್ಟು ಚೆನ್ನಾಗಿ ಮೂಡಿ ಬರಲು ಅನಂತ್ ಅವರೇ ಕಾರಣ ಎಂದರು.
Advertisement
ಚಿತ್ರಕ್ಕೆ ರಾಮ ರಾಮಾ ರೇ ಖ್ಯಾತಿಯ ವಾಸುಕಿ ವೈಭವ್ ಸಂಗೀತ ಕೊಟ್ಟಿದ್ದು, ದಡ್ಡ ಹಾಡಿಗೂ ಧ್ವನಿ ನೀಡಿದ್ದಾರೆ. ಸಿನಿಮಾದಲ್ಲಿ ಒಟ್ಟಾರೆ 9 ಹಾಡುಗಳಿದ್ದು, ಯಾವುದನ್ನು ಸಿನಿಮಾಗಾಗಿ ಮಾತ್ರ ಬರೆದಿಲ್ಲ. ಎಲ್ಲವೂ ಚಿತ್ರಕಥೆಗೆ ಅವಶ್ಯವಿದ್ದರಿಂದ ಅದನ್ನು ಬಳಕೆ ಮಾಡಲಾಗಿದೆ. ಚಿತ್ರದ 5 ಹಾಡುಗಳನ್ನು ಈಗಾಗಲೇ ಜನರ ಮುಂದಿಟ್ಟಿದ್ದೇವೆ. ಅದರಲ್ಲೂ ದಡ್ಡ… ದಡ್ಡ… ಪ್ರವೀಣ ಹಾಡು 13 ಲಕ್ಷ ವ್ಯೂ ಪಡೆದಿದೆ. ಅಲ್ಲದೇ `ಅರೆರೆ ಅವಳ ನಗುವ’ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವ್ಯೂ ಕಂಡಿದೆ. ಎಲ್ಲವೂ ಸಿನಿಮಾ ಅಭಿಮಾನಿಗಳ ಬೆಂಬಲ ಎಂದು ಧನ್ಯವಾದ ತಿಳಿಸಿದರು.
ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಹಲವರು ದೊಡ್ಡ ಸಿನಿಮಾ ಮಾಡುವಂತೆ ಹೇಳಿದ್ದರು. ಆದರೆ ನನ್ನ ಪ್ರಕಾರ ಯಾವುದು ದೊಡ್ಡ, ಸಣ್ಣ ಸಿನಿಮಾ ಎಂಬುದು ಇಲ್ಲ. ಅದ್ದರಿಂದ ಜನರಿಗೆ ಮನರಂಜನೆ ನೀಡುವುದು ನನ್ನ ಉದ್ದೇಶ. ಕಮರ್ಷಿಯಲ್ ಅಂಶಗಳೊಂದಿಗೆ ಮಕ್ಕಳ ಸಿನಿಮಾ ಮಾಡಿ ಉತ್ತಮ ಸಂದೇಶ ನೀಡುವುದು ನನ್ನ ಉದ್ದೇಶವಾಗಿದೆ. ಜನರು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಚಿತ್ರದ `ಅರೆರೆ ಅವಳ ನಗುವ’ ಹಾಡು ಪ್ರವೀಣ್ ಗೆಳೆತಿಯನ್ನು ತನ್ನತ್ತ ನೋಡುವಂತೆ ಮಾಡುವ ಪ್ರಯತ್ನದೊಂದಿಗೆ ಪ್ರತಿಯೊಬ್ಬರ ಜೀವನದಲ್ಲಿ ಕಾಣುವ ಮೊದಲ ಪ್ರೇಮವನ್ನು ನೆನಪಿಸುತ್ತದೆ. ಗೆಳತಿ ಸಿಕ್ಕಲೆಲ್ಲಾ ಚಿಗುರು ಮೀಸೆಯ ಹುಡುಗ ಮಾಡುವ ತುಂಟಾಟ ಎಲ್ಲರ ಗಮನ ಸೆಳೆಯುತ್ತದೆ. ವಿಶೇಷವಾಗಿ ಉಳಿದವರು ಕಂಡಂತೆ ಸಿನಿಮಾದಲ್ಲಿ ಹಿಟ್ ಆಗಿದ್ದ ಹುಲಿ ಡ್ಯಾನ್ಸ್ ಸನ್ನಿವೇಶವೂ ಒಂದು ಕ್ಷಣ ಕಾಲ ಮತ್ತೆ ಹಿಂದಿರುಗಿ ನೋಡುವಂತೆ ಮಾಡುತ್ತದೆ. ಹಾಡಿನ ಕೊನೆಯಲ್ಲಿ ಶಿಕ್ಷಕರಿಂದ ಹೊಡೆತ ತಿನ್ನುವ ಹಾಗೂ ನಮಸ್ತೆ ಸರ್ ಎಂದು ವಿದ್ಯಾರ್ಥಿಗಳು ಶುಭ ಕೋರುವ ಧ್ವನಿ ಹಾಡು ಮುಗಿಯಿತು ಎಂದು ನೆನಪಿಸಿ ಮತ್ತೊಮ್ಮೆ ಹಾಡು ಕೇಳುವಂತೆ ಪ್ರೇರೆಪಿಸುತ್ತದೆ.
ತುಳು ನಾಟಕ ಮೂಲಕ ಮಿಂಚುತ್ತಿರುವ ನಟ ಪ್ರಕಾಶ್ ತುಮಿನಾಡ್ ಕೂಡ ಚಿತ್ರದಲ್ಲಿ ಭುಜಂಗ ಪಾತ್ರದಲ್ಲಿ ನಟಿಸಿದ್ದಾರೆ. ಸರ್ಕಾರಿ ಹಿ.ಪ್ರಾ.ಶಾಲೆ ಕೇವಲ ಮಕ್ಕಳ ಸಿನಿಮಾ ಮಾತ್ರವಲ್ಲ ಪಕ್ಕ ಕಮರ್ಷಿಲ್ ಪ್ಯಾಕೇಜ್ ಎಂದು ವಿಶ್ವಾಸದಿಂದಲೇ ಮಾತು ಆರಂಭಸಿದ ಅವರು, ಒಂದು ಮೊಟ್ಟೆ ಸಿನಿಮಾ ಬಳಿಕ ರಿಷಬ್ ಸರ್ ನನಗೆ ಮಹತ್ವದ ಪಾತ್ರ ಕೊಟ್ಟಿದ್ದಾರೆ. ಈ ಸಿನಿಮಾ ನೈಜ ಘಟನೆಗಳ ಸ್ಫೂರ್ತಿ ಪಡೆದು ಸಿದ್ಧಪಡಿಸಲಾಗಿದೆ. ಆದರೆ ಇದು ಎಲ್ಲಾ ಶಾಲೆಗಳಿಗೂ ಎಲ್ಲಾ ಪ್ರದೇಶಗಳಿಗೂ ಕೂಡ ಅನ್ವಯವಾಗುತ್ತದೆ. ನಿರ್ದೇಶಕರ ಪರಿಶ್ರಮ ಚಿತ್ರ ಹಿಂದೆ ಹೆಚ್ಚು ಪರಿಶ್ರಮ ಇದೆ. ಇದೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಎಲ್ಲರೂ ಚಿತ್ರ ನೋಡಿ ಬೆಂಬಲಿಸಿ ಎಂದರು.
ಮಕ್ಕಳ ಚಿತ್ರ ಕೇವಲ ಕಲಾತ್ಮಕ ಅಂಶಗಳನ್ನು ಮಾತ್ರ ಹೊಂದಿರುತ್ತದೆ. ಆದರೆ ಅದು ಕಮರ್ಷಿಯಲ್ ಆಗಿರುವುದಿಲ್ಲ ಎಂಬ ಸಿನಿಮಾ ಮಂದಿಯ ವಾದದ ನಡುವೆ ತಮ್ಮ ಸಿನಿಮಾ ಪಕ್ಕ ಕಮರ್ಷಿಯಲ್ ಆಗಿದ್ದು, ಜೊತೆಗೆ ಕನ್ನಡ ಕುರಿತು ಉತ್ತಮ ಸಂದೇಶ ನೀಡುತ್ತೆ ಅಂತ ನಿರ್ದೇಶಕ ರಿಷಬ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv