– ಕಾಂತಾರ ನೆಕ್ಸ್ಟ್ ಚಾಪ್ಟರ್ ಬಗ್ಗೆ ರಿಷಭ್ ಹೇಳಿದ್ದೇನು?; ಮುಂದಿನ ಸಿನಿಮಾ ಯಾವುದು?
ಕಾಂತಾರ ಚಾಪ್ಟರ್-1 (Kantara Chapter 1) ಸಕ್ಸಸ್ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ (Rishab Shetty) ಅವರಿಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ತಾಯಿ ಚಾಮುಂಡಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ನಾನು ದೈವವನ್ನ ನಂಬುವಂತವನು. ದೈವದ ಅನುಮತಿ ಪಡೆದೇ ಸಿನಿಮಾ ಮಾಡಿದ್ದೇನೆ. ನಾಡಿನ ಜನತೆಯಿಂದ ಅದ್ಭುತ ಯಶಸ್ಸು ಸಿಕ್ಕಿದೆ ಎಂದರಲ್ಲದೇ ಗಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಕನ್ನಡಿಗರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ನಾನು ಸಿನಿಮಾ ಡೈರೆಕ್ಟರ್ ಅಷ್ಟೇ. ಲೆಕ್ಕದ ವಿಚಾರದಲ್ಲಿ ನಾನಿಲ್ಲ. ವಿಜಯ ಕಿರಗಂದೂರು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.
ದೈವಾರಾಧಕರ ವಿರೋಧಕ್ಕೆ ರಿಷಬ್ ಖಡಕ್ ಉತ್ತರ
ಇನ್ನೂ ದೈವರಾದಕರು (Daivaradhakas) ಸಿನಿಮಾ ಬಗ್ಗೆ ವಿರೋಧ ಎತ್ತಿರುವ ಕುರಿತ ಪ್ರಶ್ನೆಗೆ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದೇನೆ. ದೈವ ದೇವರ ವಿಚಾರಗಳನ್ನ ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ. ನಾನು ದೈವವನ್ನ ನಂಬುತ್ತೇನೆ ಆರಾಧನೆ ಮಾಡುತ್ತೇನೆ. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ನಾನು ಹೊಸಬನಲ್ಲ, ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಬೇಕು. ಕುಂದಾಪುರದ ಕೆರಾಡಿ ಗ್ರಾಮದಿಂದ ಬಂದು ಜನರಿಗೆ ರೀಚ್ ಆಗುವ ರೀತಿ ಸಿನಿಮಾ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದರಿಂದ ತುಂಬಾ ಖುಷಿಯಾಗಿದೆ ಎಂದ ರಿಷಬ್, ಕಾಂತಾರ ನೆಕ್ಸ್ಟ್ ಚಾಪ್ಟರ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ನನ್ನ ಮುಂದಿನ ಚಿತ್ರ ʻಜೈ ಹನುಮಾನ್ʼ. ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು. ಇನ್ನೂ ಅಮಿತಾಬಚ್ಚನ್ ಭೇಟಿಯಾದ ಬಗ್ಗೆ ಮಾತನಾಡಿದ ರಿಷಬ್, ಕನ್ನಡದಲ್ಲಿ ಅಣ್ಣಾವ್ರು ಹೇಗೊ ಅದೇ ರೀತಿ ಬಾಲಿವುಡ್‌ನಲ್ಲಿ ಅಮಿತಾಬಚ್ಚನ್. ಅಣ್ಣಾವ್ರು ಯಾವ ರೀತಿ ನೋಡುತ್ತೇವೆ. ಅದೇ ರೀತಿ ಅಮಿತಾಬಚ್ಚನ್ ಅವರನ್ನು ಅಲ್ಲಿಯ ಜನ ನೋಡುತ್ತಾರೆ. ಅವರು ವಿಶೇಷ ವ್ಯಕ್ವಿತ್ವ ಹಂಚಿಕೊಂಡಿದ್ದಾರೆ. ಕಾಂತಾರಕ್ಕೆ ನಾನು ಚಿರ ಖುಣಿಯಾಗಿದ್ದೇನೆ ಎಂತ ಹೇಳಿದ್ದಾರೆ ಎಂದರು.
ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಹೇಳಿದ್ದೇನು?
ಸಲಹೆ ಕೊಡುವಷ್ಟು ದೊಡ್ಡವನು ನಾನಲ್ಲ. ಎಲ್ಲ ನಟರನ್ನು ಅಭಿಮಾನಿಯಾಗಿ ನೋಡುತ್ತೇನೆ. ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರೂ ಹೆಮ್ಮೆ ಪಡುವ ಕಾಲ ಬಂದಿದೆ ಎಂದು ಹೇಳಿದರು. ದೈವದ ರೀತಿ ಚಿತ್ರ ಮಂದಿರದ ಮುಂದೆ ನಟನೆ ಮಾಡುತ್ತಿರುವ ವಿಚಾರ ಬಗ್ಗೆಯೂ ಪ್ರತಿಕ್ರಿಯಿಸಿ, ಯಾರು ಕೂಡ ದೈವದ ಅನುಕರಣೆ ಮಾಡಬಾರದು ಎಂದರು.
ದೈವದ ಅನುಕರಣೆ ಮಾಡಬೇಡಿ
ಏಕೆಂದ್ರೆ ನಾವು ಕೇವಲ ಸಿನಿಮಾ ಮಾತ್ರ ಮಾಡಿಲ್ಲ, ನಿಜವಾದ ಶ್ತದ್ಧೆ ಭಕ್ತಿಯಿಂದ ಮಾಡಿರುತ್ತೇವೆ. ಜನ ಥಿಯೇಟರ್ ಹೊರಗೆ ಈ ರೀತಿ ಕೂಗೋದು ನೋಡಿದ್ರೆ, ಇದರಿಂದ ನನಗೂ ಸಹ ಬೇಜಾರಾಗಿದೆ. ಯಾರೂ ಕೂಡ ಈ ರೀತಿ ದೈವದ ಅನುಕರಣೆ ಮಾಡಬೇಡಿ. ಇದರಿಂದ ಬೇಸರವಾಗುತ್ತೆ ಎಂದು ಹೇಳಿದರು. ಲೆಕ್ಕಚಾರದ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.