ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ತೆಲುಗಿನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಸಿತಾರಾ ಎಂಟರ್ಟೈನ್ಮೆಂಟ್ಸ್, ಇದೀಗ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಜೊತೆಗೆ ಆಗಮಿಸುತ್ತಿದೆ. ‘ಪ್ರೊಡಕ್ಷನ್ ನಂಬರ್ 36’ (Production No.36) ಹೆಸರಿನ ಬಿಗ್ ಬಜೆಟ್ ಸಿನಿಮಾ ಘೋಷಣೆ ಮಾಡಿದೆ. ಈ ಮೂಲಕ ಕನ್ನಡ ಸಿನಿಮಾ ನಿರ್ಮಾಣಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಐತಿಹಾಸಿಕ ಆಕ್ಷನ್ ಡ್ರಾಮಾ ಹಿನ್ನೆಲೆಯ ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಾಯಕನಾಗಿ ನಟಿಸಲಿದ್ದಾರೆ. ಚಿತ್ರದ ಅನೌನ್ಸ್‌ಮೆಂಟ್ ಪೋಸ್ಟರ್ ಸಹ ರಿಲೀಸ್ ಆಗಿದೆ.
’ಕಾಂತಾರ’ (Kantara) ಸಿನಿಮಾದ ಮೂಲಕ ಭಾರತೀಯ ಚಿತ್ರರಂಗವನ್ನೇ ಬೆರಗುಗೊಳಿಸಿದ ನಟ ರಿಷಬ್ ಶೆಟ್ಟಿ, ಈಗ ‘ಕಾಂತಾರ-1’ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಈ ನಡುವೆಯೇ ಸಿತಾರ ಎಂಟರ್ಟೈನ್ಮೆಂಟ್ ಹಾಗೂ ಫಾರ್ಚೂನ್ ಫೋರ್ ಸಿನೆಮಾಸ್ ಜಂಟಿಯಾಗಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, 18ನೇ ಶತಮಾನದ ಕಥೆ ಹೇಳಲು ಮುಂದಾಗಿದ್ದಾರೆ. ಇದನ್ನೂ ಓದಿ: ʻಲೂಸ್ ಮಾದʼ ಚಿತ್ರಕ್ಕೆ ಯೋಗಿನೇ ಹೀರೋ
ಈ ಐತಿಹಾಸಿಕ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿರುವವರು ನಿರ್ದೇಶಕ ಅಶ್ವಿನ್ ಗಂಗರಾಜು. ‘ಪ್ರೊಡಕ್ಷನ್ ನಂ.36’ ಮೂಲಕ ಈ ಬಾರಿ ಇನ್ನಷ್ಟು ಭರ್ಜರಿ ದೃಶ್ಯ ವೈಭವದ ಕಥಾನಕವನ್ನು ತೆರೆ ಮೇಲೆ ತರುವುದಾಗಿ ನಿರ್ಧರಿಸಿದ್ದಾರೆ. ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಒಂದೇ ಸಮಯದಲ್ಲಿ ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ. ಇನ್ನುಳಿದಂತೆ ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯಾ, ಸಿತಾರ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನೆಮಾಸ್‌ಗಳ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಶ್ರೀಕರ ಸ್ಟುಡಿಯೋಸ್ ಈ ಮಹಾಕಾವ್ಯವನ್ನು ಪ್ರಸ್ತುತಪಡಿಸುತ್ತಿದೆ. ಇನ್ನುಳಿದಂತೆ ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿ ಬಹುತೇಕ ಕನ್ನಡಿಗರು ಕೂಡಿರುವುದಲ್ಲದೆ, ಬಹುಭಾಗ ಚಿತ್ರೀಕರಣ ಕರ್ನಾಟಕದಲ್ಲೇ ಮಾಡಲಾಗುವುದು. ಯಾವಾಗ ಶುರು, ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಹೆಚ್ಚಿನ ವಿವರ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಇದನ್ನೂ ಓದಿ: I Stand With Darshan Sir – ದರ್ಶನ್, ಧ್ರುವ ನಡುವಿನ ಬಿರುಕು ಶಮನ?