ಸಿದ್ಧ ಸೂತ್ರದ ಸಿನಿಮಾಗಳ ಸದ್ದಿನ ಸರಹದ್ದಿನೊಳಗೇ ಭಿನ್ನ ಪ್ರಯೋಗಗಳು ಅಬ್ಬರಿಸದಿದ್ದರೆ ಯಾವುದೇ ಭಾಷೆಯ ಚಿತ್ರರಂಗವಾದರೂ ನಿಂತ ನೀರಿನಂತಾಗಿ ಬಿಡುತ್ತದೆ. ಈ ಕಾರಣದಿಂದಲೇ ಹೊಸ ಅಲೆಯ ಚಿತ್ರಗಳು, ಹೊಸ ಪ್ರಯೋಗಗಳ ಮೂಸೆಯಲ್ಲರಳಿಕೊಂಡ ಸಿನಿಮಾಗಳು ಮುಖ್ಯವಾಗಿ ಪರಿಗಣಿಸಲ್ಪಡುತ್ತವೆ. ಈ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಸೂತ್ರದಾರಿಕೆಯ ಕಥಾ ಸಂಗಮ ಒಂದು ಪರಿಣಾಮಕಾರಿ ಪ್ರಯತ್ನ. ಈ ಕಾರಣದಿಂದಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರೆಲ್ಲರೂ ತುದಿಗಾಲಲ್ಲಿ ಕಾಯಲಾರಂಭಿಸಿದ್ದರು. ಇದೀಗ ಕಥಾ ಸಂಗಮ ತೆರೆ ಕಂಡಿದೆ. ಒಂದಕ್ಕಿಂತ ಒಂದು ಭಿನ್ನವಾಗಿರುವ, ರುಚಿಕಟ್ಟಾಗಿರುವ ಏಳು ಕಥೆಗಳೊಂದಿಗೆ ತೆರೆಕಂಡಿರುವ ಈ ಚಿತ್ರ ನೋಡುಗರನ್ನೆಲ್ಲ ತೃಪ್ತವಾಗಿಸುವಲ್ಲಿ ಯಶ ಕಂಡಿದೆ.
Advertisement
ಈ ಸಿನಿಮಾದಲ್ಲಿ ಮೊದಲೇ ಹೇಳಿದಂತೆ ಏಳು ಕಥೆಗಳಿವೆ. ಆ ಪ್ರತೀ ಕಥೆಯನ್ನೂ ಕೂಡಾ ಕಾಡುವಂತೆ, ನೋಡುಗರ ಮನಸುಗಳಿಗೆ ನಾಟುವಂತೆ ಕಟ್ಟಿ ಕೊಟ್ಟಿರೋದು ಈ ಸಿನಿಮಾದ ಪ್ರಧಾನ ಪ್ಲಸ್ ಪಾಯಿಂಟುಗಳು. ಈ ಸಿನಿಮಾ ಆರಂಭವಾಗುವುದು ರೈನ್‍ಬೋ ಲ್ಯಾಂಡ್ ಎಂಬ ಕಥಾನಕದ ಮೂಲಕ. ಅಪ್ಪ ಮಗಳ ಬಾಂಧವ್ಯದ ಹಿತವಾದ ಕಥೆಯೊಂದಿಗೆ ತೆರೆದುಕೊಳ್ಳುವ ಈ ಸಿನಿಮಾದಲ್ಲಿ ಸತ್ಯಕಥಾ ಪ್ರಸಂಗ, ಗಿರ್‍ಗಿಟ್ಲೆ, ಉತ್ತರ, ಪಡುವಾರಹಳ್ಳಿ, ಸಾಗರ ಸಂಗಮ್ಮ ಮತ್ತು ಲಚ್ಚವ್ವ ಎಂಬ ಕಥೆಗೂ ಸೇರಿಕೊಳ್ಳುತ್ತವೆ. ವಿಶೇಷವೆಂದರೆ ಇವೆಲ್ಲವೂ ಒಂದಕ್ಕೊಂದು ಸೂತ್ರ ಸಂಬಂಧವಿಲ್ಲದ ಕಥೆಗಳು. ಅವೆಲ್ಲವೂ ಪರಿಪೂರ್ಣ ಅನುಭೂತಿ ನೀಡುವಂತೆ ತೆರೆದುಕೊಂಡಿರೋದೇ ಕಥಾ ಸಂಗಮದ ನಿಜವಾದ ಸ್ಪೆಷಾಲಿಟಿ.
Advertisement
Advertisement
ಈ ಏಳು ಕಥೆಗಳನ್ನು ಏಳು ಮಂದಿ ನಿರ್ದೇಶಕರು ರೂಪಿಸಿದ್ದಾರೆ. ಇವೆಲ್ಲವೂ ಸಹ ಯಾವುದು ಹೆಚ್ಚು ಯಾವುದು ಕಡಿಮೆ ಎಂಬ ಅಂದಾಜೇ ಸಿಗದಷ್ಟು ಚೆಂದಗೆ ಮೂಡಿ ಬಂದಿವೆ. ಪ್ರೇಕ್ಷಕರ ಗಮನ ಆಚೀಚೆ ಚದುರದಂತೆ ಈ ಏಳು ಕಥೆಗಳನ್ನು ನಿರೂಪಿಸಿರುವ ರೀತಿಯೇ ಯಾರನ್ನಾದರೂ ಸೆಳೆಯುವಂತಿದೆ. ಈ ಏಳು ಕಥೆಗಳಲ್ಲಿನ ದೃಷ್ಯಾವಳಿಗಳು, ಪಾತ್ರಗಳು ಪ್ರೇಕ್ಷಕರ ಮನಸಲ್ಲುಳಿಯುವಂತೆ ಮೂಡಿ ಬಂದಿವೆ. ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಯಜ್ಞಾ ಶೆಟ್ಟಿ, ಹರಿ ಸಮಷ್ಠಿ, ಅವಿನಾಶ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಅವರ ಅಭಿನಯವೇ ಕಥಾ ಸಂಗಮಕ್ಕೆ ಮತ್ತಷ್ಟು ಕಸುವು ತುಂಬುವಂತೆ ಮೂಡಿ ಬಂದಿದೆ. ಅವರೆಲ್ಲರೂ ತಂತಮ್ಮ ಪಾತ್ರಗಳನ್ನು ಒಳಗಿಳಿಸಿಕೊಂಡು ನಟಿಸಿದ್ದಾರೆ. ಇದರೊಂದಿಗೆ ಪ್ರತೀ ಸನ್ನಿವೇಶಗಳೂ ಶಕ್ತವಾಗುವಂತೆ ನೋಡಿಕೊಂಡಿದ್ದಾರೆ.
Advertisement
ಇದು ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಾಗುವಂಥಾ ಪ್ರಯತ್ನ. ಅದು ನಿಜಕ್ಕೂ ಫಲ ಕೊಡುವಂತೆಯೇ ಮೂಡಿ ಬಂದಿದೆ. ಈಗ್ಗೆ ನಾಲಕ್ಕು ದಶಕಗಳ ಹಿಂದೆ ಪುಟ್ಟಣ್ಣ ಕಣಗಾಲ್ ಕಥಾ ಸಂಗಮ ಎಂಬ ಸಿನಿಮಾದ ಮೂಕಕ ನಾಲಕ್ಕು ಕಥೆಗಳನ್ನು ಹೇಳಿದ್ದರು. ಅದು ಕನ್ನಡ ಚಿತ್ರರಂಗದ ಹೆಮ್ಮೆಯಂಥಾ ಚಿತ್ರ. ಇದೀಗ ರಿಷಬ್ ಶೆಟ್ಟಿ ಸೂತ್ರಧಾರಿಕೆಯ ಈ ಚಿತ್ರದಲ್ಲಿ ಏಳು ಸಮೃದ್ಧವಾದ ಕಥೆಗಳನ್ನು ಹೇಳಲಾಗಿದೆ. ಈ ಚಿತ್ರವನ್ನು ರಿಷಬ್ ಮತ್ತು ಅವರ ತಂಡ ಪುಣ್ಣ ಕಣಗಾಲರಿಗೆ ಅರ್ಪಿಸಿದೆ. ಒಂದು ವೇಳೆ ಕಣಗಾಲರು ಈಗೇನಾದರೂ ಬದುಕಿದ್ದರೆ ಖಂಡಿತಾ ಈ ಚಿತ್ರವನ್ನು, ಅದರ ಸೂತ್ರಧಾರರನ್ನು ಮೆಚ್ಚಿ ಕೊಂಡಾಡುತ್ತಿದ್ದರು. ಅಷ್ಟೊಂದು ಚೆಂದಗೆ ಮೂಡಿ ಬಂದಿರೋ ಈ ಸಿನಿಮಾವನ್ನು ಸಾಕಾರಗೊಳಿಸಿದ ರಿಷಬ್ ಶೆಟ್ಟಿ ಮತ್ತವರ ತಂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ.
ರೇಟಿಂಗ್: 4/5