ಬೆಂಗಳೂರು: ವರ್ಷಾಂತರಗಳ ಹಿಂದೆ ಪುಟ್ಟಣ್ಣ ಕಣಗಾಲರು ನಿರ್ದೇಶನ ಮಾಡಿದ್ದ ಕಥಾ ಸಂಗಮ ಚಿತ್ರವನ್ನು ಕನ್ನಡದ ಪ್ರೇಕ್ಷಕರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ಅದು ಆ ಕಾಲಕ್ಕೊಂದು ಹೊಸ ಪ್ರಯೋಗ. ಅದೊಂದು ಸಾಹಸ. ಈಗ ಕಾಲಘಟ್ಟ ಬದಲಾಗಿದೆ. ಕನ್ನಡ ಚಿತ್ರರಂಗದಲ್ಲಿಯೂ ಹೊಸ ಹರಿವು ಜೋರಾಗಿದೆ. ಈ ಅಲೆಯಲ್ಲಿ ಮುಂಚೂಣಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಕಥಾ ಸಂಗಮವೆಂಬ ಶೀರ್ಷಿಕೆಯಲ್ಲಿಯೇ ಚಿತ್ರವೊಂದನ್ನು ಅಣಿಗೊಳಿಸಿದ್ದಾರೆ. ಏಳು ಮಂದಿ ನಿರ್ದೇಶಕರ ಏಳು ಕಥೆಗಳನ್ನೊಳಗೊಂಡಿರುವ ಈ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೀಗ ಮುಹೂರ್ತ ನಿಗದಿಯಾಗಿದೆ. ಕಥಾಸಂಗಮ ಎಂಬುದು ಎಷ್ಟು ಹೊಸತನದ ಪ್ರಯೋಗವೋ ಅದಕ್ಕೆ ತಕ್ಕುದಾಗಿಯೇ ರಿಷಬ್ ಶೆಟ್ಟಿ ಮತ್ತವರ ಸಂಗಡಿಗರು ಧ್ವನಿಸುರುಳಿ ಕಾರ್ಯಕ್ರಮವನ್ನೂ ರೂಪಿಸಿದ್ದಾರೆ.
Advertisement
ನವೆಂಬರ್ 21ರಂದು ಸಂಜೆ 5.30ಕ್ಕೆ ರವೀಂದ್ರ ಕಲಾ ಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಕಥಾಸಂಗಮದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನೆರವೇರಲಿದೆ. ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಿಗೆ, ಧ್ವನಿ ಸುರುಳಿ ಬಿಡುಗಡೆಯಂಥಾದ್ದಕ್ಕೆ ಒಂದಷ್ಟು ಚೌಕಟ್ಟು, ಸಿದ್ಧ ಸೂತ್ರಗಳಿವೆ. ಆದರೆ ಕಥಾಸಂಗಮದ ಧ್ವನಿ ಸುರುಳಿ ಕಾರ್ಯಕ್ರಮವನ್ನು ರೂಪಿಸಿರೋ ರೀತಿಯೇ ನಿಜಕ್ಕೂ ಆಹ್ಲಾದಕರವಾಗಿದೆ. ನಾಟಕ, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ರಂಗೇರಿಕೊಳ್ಳುವ ರವೀಂದ್ರ ಕಲಾಕ್ಷೇತ್ರದ ಪರಿಸರವನ್ನು ಸಿನಿಮಾ ಕಾರ್ಯಕ್ರಮದ ಮೂಲಕ ಕಳೆಗಟ್ಟಿಸುವಂತೆ ರಿಷಬ್ ಶೆಟ್ಟಿ ಮತ್ತು ತಂಡ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
Advertisement
Advertisement
ಇದರ ಆಹ್ವಾನ ಪತ್ರಿಕೆ ಗಮನಿಸಿದರೇನೇ ಈ ಧ್ವನಿ ಸುರುಳಿ ಬಿಡುಗಡೆ ಸಮಾರಂಭದ ವೈಶಿಷ್ಟ್ಯವೇನೆಂಬುದು ಅರ್ಥವಾಗುತ್ತದೆ. ಇದನ್ನೂ ಒಂದು ಸಾಹಿತ್ಯದ ಕಾರ್ಯಕ್ರಮದಂತೆ, ಸಂಗೀತದ ಹಬ್ಬದಂತೆ ನಡೆಸಲು ನೀಲನಕ್ಷೆ ರೆಡಿ ಮಾಡಿಕೊಳ್ಳಲಾಗಿದೆ. ಅಂದು ಸಂಸ ಬಯಲು ರಂಗಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಥಾಸಂಗಮದ ಧ್ವನಿಸುರುಳಿಯನ್ನು ಸಂಜೆ ಆರು ಗಂಟೆಗೆ ಲೋಕಾರ್ಪಣೆಗೊಳಿಸಲಿದ್ದಾರೆ. ಆ ನಂತರ 6.15ರಿಂದ ಪ್ರದೀಪ್ ಬಿ.ವಿ ಮತ್ತು ಸಂಗಡಿಗರಿಂದ ಪುಟ್ಟಣ್ಣ ಕಣಗಾಲ್ ಚಿತ್ರಗಳಿಂದ ಆಯ್ದ ಗೀತೆಗಳ ಸಂಗೀತ ಸುಧೆ ಹರಿಯಲಿದೆ. 7.15ರಿಂದ ಕಥಾ ಸಂಗಮ ಚಿತ್ರದ ದೃಶ್ಯ ಗೀತೆ, ದೃಶ್ಯದ ತುಣುಕು ಮತ್ತು ತೆರೆಯ ಹಿಂದಿನ ಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ. 7.30ರಿಂದ ಎಂಟು ಗಂಟೆಯವರೆಗೆ ಸಂಗೀತಾ ಕಟ್ಟಿ, ವಾಸು ದೀಕ್ಷಿತ್, ಡಾಸ್ ಮೋಡ್, ರಾಜ್ ಬಿ ಶೆಟ್ಟಿ ಮತ್ತು ಅದಿತಿ ಸಾಗರ್ ಮುಂತಾದವರಿಂದ ಕಥಾ ಸಂಗಮ ಚಿತ್ರದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
Advertisement
ಇದು ನಿಜಕ್ಕೂ ಹೊಸ ರೀತಿಯ ಬೆಳವಣಿಗೆ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳೂ ಸಾಹಿತ್ಯಾತ್ಮಕ ಗಂಧ ಮೆತ್ತಿಕೊಂಡು ನಡೆಯುವುದು ಖುಷಿಯ ವಿಚಾರ. ಇದಕ್ಕೆ ಕಾರಣರಾದ ರಿಷಬ್ ಶೆಟ್ಟಿ ಮತ್ತು ತಂಡವನ್ನು ಅಭಿನಂದಿಸಲೇ ಬೇಕು. ಈ ಕಾರ್ಯಕ್ರಮ ಎಷ್ಟು ವಿಶಿಷ್ಟವಾಗಿ ನಡೆಯಲಿದೆಯೋ ಅದಕ್ಕೆ ತಕ್ಕುದಾದ ರೀತಿಯಲ್ಲಿಯೇ ಕಥಾ ಸಂಗಮ ಚಿತ್ರ ಮೂಡಿ ಬಂದಿದೆಯಂತೆ. ವಿಶೇಷವೆಂದರೆ ಇದರಲ್ಲಿ ಏಳು ಮಂದಿ ಬರೆದ ಏಳು ಕಥೆಗಳಿವೆ. ಅದನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ರಿಷಬ್ ಶೆಟ್ಟಿ ಹೊತ್ತುಕೊಂಡಿದ್ದಾರೆ. ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ, ಹರಿಪ್ರಿಯಾ, ಯಜ್ಞಾ ಶೆಟ್ಟಿ, ಕಿಶೋರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಲವತ್ತು ಮಂದಿ ತಂತ್ರಜ್ಞರು ಸೇರಿ ರೂಪಿಸಿರೋ ಈ ಸಿನಿಮಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದ ಮೂಲಕ ಮತ್ತಷ್ಟು ಕಳೆಗಟ್ಟಿಕೊಳ್ಳಲಿದೆ.