Connect with us

Cinema

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ರಿಷಬ್ ಶೆಟ್ಟಿ

Published

on

ನವದೆಹಲಿ: ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿದ್ದು, ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರಿಂದ ರಿಷಬ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಉತ್ತಮ ಮಕ್ಕಳ ಚಿತ್ರವಾಗಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ರಾಷ್ಟ್ರೀಯಾ ಪ್ರಶಸ್ತಿ ಪಡೆದಿದ್ದು, ಕನ್ನಡ ಚಿತ್ರರಂಗದ ಖ್ಯಾತಿ ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಸೋಮವಾರ ದೆಹಲಿಯಲ್ಲಿ ನಡೆದ 66ನೇ ರಾಷ್ಟ್ರೀಯ ಚಲನಚಿತ್ರ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಿಷಬ್ ಶೆಟ್ಟಿ ಅವರಿಗೆ ಸ್ವರ್ಣ ಕಮಲ ಪ್ರಶಸ್ತಿ ನೀಡಿ ಗೌರವಿಸಿದರು.

2018ರಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಬಿಡುಗಡೆಯಾಗಿತ್ತು. ಗಡಿಭಾಗ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿ ಏನು? ಅಲ್ಲಿನ ಮಕ್ಕಳು ತಮ್ಮ ಶಾಲೆಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟರು ಎನ್ನುವುದನ್ನು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಅದ್ಭುತವಾಗಿ ತೋರಿಸಿದ್ದರು. ಜೊತೆಗೆ ಈ ಚಿತ್ರದ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ಸಕಾರಾತ್ಮಕ ಸಂದೇಶವನ್ನು ಸಾರುವ ಮೂಲಕ ರಿಷಬ್ ಶೆಟ್ಟಿ ಪ್ರೇಕ್ಷಕರ ಮನ ಗೆದ್ದಿದ್ದರು.

ರಿಷಬ್ ಶೆಟ್ಟಿ ಅವರು ಸ್ವರ್ಣ ಕಮಲ ಪ್ರಶಸ್ತಿ ಪಡೆದ ಬಳಿಕ ಟ್ವೀಟ್ ಮಾಡಿ, ಪ್ರಶಸ್ತಿ ಸ್ವಿಕರಿಸಿರುವ ಬಗ್ಗೆ ನಿಜಕ್ಕೂ ತುಂಬಾ ಹೆಮ್ಮೆಯಾಗುತ್ತಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ತಾರೆಯರು ಕೂಡ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅವರ ಸ್ನೇಹಿತ, ನಟ ರಕ್ಷಿತ್ ಶೆಟ್ಟಿ ಕೂಡ ಗೆಳೆಯನ ಸಾಧನೆಗೆ ಖುಷಿ ಪಟ್ಟಿದ್ದಾರೆ.

ಎಂಥಾ ಸಾಧನೆ, ನಮ್ಮ ಇಡೀ ತಂಡವೇ ನಿನ್ನ ಬಗ್ಗೆ ಹೆಮ್ಮೆ ಪಡುತ್ತಿದೆ ಮಗಾ. ಇನ್ನೂ ಸಾಕಷ್ಟು ಪ್ರಶಸ್ತಿಗಳು ನಿನ್ನ ಸಾಧನೆಯ ಹಾದಿಯಲ್ಲಿ ಜೊತೆಯಾಗಲಿದೆ ಎಂದು ಬರೆದು ರಿಷಬ್ ಶೆಟ್ಟಿ ಅವರು ಸ್ವರ್ಣ ಕಮಲ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋ, ಫೋಟೋವನ್ನು ಹಾಕಿ ಟ್ವಿಟ್ಟರ್ ನಲ್ಲಿ ಸಿಂಪಲ್ ಸ್ಟಾರ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

Click to comment

Leave a Reply

Your email address will not be published. Required fields are marked *