ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಹಡಿಲು ಭೂಮಿ ಬೇಸಾಯ ಅಂದೋಲನ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪಾಲ್ಗೊಂಡು ಬೇಸಾಯ ಮಾಡಿದ್ದಾರೆ.
ಮೂಡುತೋನ್ಸೆ ಎಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭತ್ತದ ಗದ್ದೆಯಲ್ಲಿ ಕಳೆಗಳನ್ನು ತೆಗೆದು ಬೇಸಾಯ ಚಟುವಟಿಕೆಗೆ ಬೆಂಬಲ ನೀಡಿದರು. ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ 1500 ಎಕರೆ ಹಡಿಲು ಭೂಮಿ ಬೇಸಾಯ ಮಾಡಲಾಗಿದೆ. ಈ ಗದ್ದೆಗಳಲ್ಲಿ ಪೈರಿನ ನಡುವೆ ಕಳೆ ಗಿಡಗಳು ಬೆಳೆದಿರುವುದರಿಂದ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಸೇವಾ ಮನೋಭಾವನೆಯಿಂದ ಪಾಲ್ಗೊಂಡು ಕಳೆಗಳನ್ನು ತೆಗೆಯುವ ಕಾರ್ಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಂಗಾರದ ಮನುಷ್ಯನಿಗೆ ಅವಮಾನ- ಗೂಗಲ್‍ಗೆ ರಿಷಬ್ ಶೆಟ್ಟಿ ರಿಪೋರ್ಟ್
ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೆಳ ನೇಜಾರು, ಮೂಡುತೋನ್ಸೆ, ಕಲ್ಯಾಣಪುರದಲ್ಲಿ ಕಳೆಗಳನ್ನು ತೆಗೆಯುವ ಕಾರ್ಯ ನಡೆಯುತ್ತಿದ್ದು, ಈ ಕಾರ್ಯದಲ್ಲಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ.ಸಂದೀಪ್ ಕುಮಾರ್, ರಿಷಬ್ ಶೆಟ್ಟಿ ಅವರು ಗದ್ದೆಗಳಿದು ಪೈರಿನ ನಡುವೆ ಬೆಳೆದ ಕಳೆಗಳನ್ನು ತೆಗೆಯುವ ಕಾರ್ಯದಲ್ಲಿ ಭಾಗವಹಿಸಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದರು. ಇದನ್ನೂ ಓದಿ: ಚೊಚ್ಚಲ ಬಾಲಿವುಡ್ ಸಿನಿಮಾ ಶೂಟಿಂಗ್ ಮುಗಿದ ಖುಷಿಯಲ್ಲಿ ಕೂಡಗಿನ ಕುವರಿ
ಸುಮಾರು ಒಂದು ಗಂಟೆಗಳ ಕಾಲ ಕೃಷಿಕನಂತೆ ಗದ್ದೆಯಲ್ಲಿ ಕಳೆಗಳನ್ನು ಕಿತ್ತರು. ರಿಶಬ್ ಶೆಟ್ಟಿ ಬಂದಿರುವ ಕಾರಣ ಜನ ಗದ್ದೆಯಲ್ಲಿ ಲವಲವಿಕೆಯಿಂದ ಬೇಸಾಯ ಚಟುವಟಿಕೆಯಲ್ಲಿ ಪಾಲ್ಗೊಂಡರು. ರಿಷಬ್ ಶೆಟ್ಟಿ ಜೊತೆ ಯುವಕರು ಗ್ರಾಮಸ್ಥರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಉಡುಪಿ ಶಾಸಕರು ರಾಜ್ಯಕ್ಕೆ ದೇಶಕ್ಕೆ ಮಾದರಿ ಕೆಲಸವನ್ನು ಮಾಡುತ್ತಿದ್ದಾರೆ. ಬೇಸಾಯದಿಂದ ಜನ ವಿಮುಖವಾಗುವ ಹೊತ್ತಿಗೆ ಇಂತಹ ಅಭಿಯಾನಗಳು ಬಹಳ ಅವಶ್ಯಕತೆ ಇದೆ ಎಂದು ರಿಷಬ್ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ವಿಖ್ಯಾತ್ ಶೆಟ್ಟಿ, ರಾಜ್ಯ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಕೇದಾರೋತ್ಥಾನ ಟ್ರಸ್ಟ್ ನ ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ ಹಾಗೂ ನಗರ ಮತ್ತು ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯರು, ಕೃಷಿಕರು ಉಪಸ್ಥಿತರಿದ್ದರು.