ಎದ್ದೇಳಿ ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಆತಂಕದಲ್ಲಿದೆ: ರಾಹುಲ್ ಗಾಂಧಿ

Public TV
1 Min Read
MODI RAHUL

ನವದೆಹಲಿ: ಬಲಪಂಥೀಯ ಆಲೋಚನೆ ಇರುವವರನ್ನು ಕೇಂದ್ರೀಯ ನಾಗರಿಕ ಸೇವೆಗಳಿಗೆ ನೇಮಕಾತಿ ಮಾಡುವ ಚಿಂತನೆಯಲ್ಲಿ ಕೇಂದ್ರದ ಎನ್‍ಡಿಎ ಸರ್ಕಾರ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಪತ್ರವನ್ನು ಟ್ಟಿಟರ್ ನಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಆರ್‍ಎಸ್‍ಎಸ್ ಸೂಚಿಸಿದ ಅಭ್ಯರ್ಥಿಗಳನ್ನು ಕೇಂದ್ರದ ಸೇವೆಗಳಿಗೆ ನೇಮಕಾತಿ ಮಾಡುವ ಪ್ರಧಾನಿಗಳ ಹುನ್ನಾರ ಇದರಲ್ಲಿ ಅಡಗಿದೆ. ಸೇವಾ ನೇಮಕಾತಿಯಲ್ಲಿ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯನ್ನಷ್ಟೆ ಗಣನೆಗೆ ತೆಗೆದುಕೊಳ್ಳದೆ ವ್ಯಕ್ತಿನಿಷ್ಠತೆಯನ್ನು ಮಾನದಂಡವಾಗಿ ಪರಿಗಣಿಸುವಂತೆ ಮಾಡುವ ಪ್ರಸ್ತಾವನೆ ವಿದ್ಯಾರ್ಥಿಗಳ ಭವಿಷ್ಯವನ್ನು ಆತಂಕಕ್ಕೆ ದೂಡಲಿದೆ. ಎದ್ದೇಳಿ ವಿದ್ಯಾರ್ಥಿಗಳೇ ಎಂದು ಟ್ವೀಟ್ ಮಾಡಿದ್ದಾರೆ.

ಏನಿದು ವಿವಾದ?
ಐಎಎಸ್, ಐಪಿಎಸ್ ಸೇರಿ ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರೀಯ ಸೇವೆಗೆ ಆಯ್ಕೆ ಆಗುವ ಅಭ್ಯರ್ಥಿಗಳು ಮಸ್ಸೌರಿಯಲ್ಲಿರೋ ಲಾಲ್ ಬಹುದ್ದೂರ್ ಶಾಸ್ತ್ರಿ ಆಡಳಿತಾತ್ಮಕ ಅಕಾಡೆಮಿಯಲ್ಲಿ ಮೂರು ತಿಂಗಳು ಫೌಂಡೇಷನ್ ಕೋರ್ಸ್‍ಗೆ ಹಾಜರಾಗಬೇಕಾಗುತ್ತದೆ. ಆ ಕೋರ್ಸ್‍ನಲ್ಲಿ ಸಿಗುವ ಅಂಕಗಳ ಆಧಾರದ ಮೇಲೆ ಐಎಎಸ್, ಐಪಿಎಸ್ ಮತ್ತು ಐಆರ್‍ಎಸ್ ಹುದ್ದೆ ನಿರ್ಧಾರವಾಗಲಿದೆ. ಈ ಅಂಕಗಳನ್ನು ನಿರ್ಧರಿಸೋದು ಅಕಾಡೆಮಿಯೇ ಹೊರತು ಯುಪಿಎಸ್‍ಸಿ ಅಲ್ಲ.

ಈ ಸಂಬಂಧ ಒಂದು ವಾರದೊಳಗೆ ಅಭಿಪ್ರಾಯ ತಿಳಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯ ಆಡಳಿತ ಮತ್ತು ಸಿಬ್ಬಂದಿ ಸಚಿವಾಲಯಕ್ಕೆ ಕೇಳಿಕೊಂಡಿದೆ. ಇದು ವಿವಾದವಾಗುತ್ತಿದ್ದಂತೆ ಸರ್ಕಾರ ಸಲಹೆಯನ್ನು ನೀಡಲಾಗಿದ್ದು, ಇದೇ ಅಂತಿಮವಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

 

Share This Article
Leave a Comment

Leave a Reply

Your email address will not be published. Required fields are marked *