ತಮಿಳಿನ ಹೆಸರಾಂತ ನಟ ವಿಜಯ್ ನಟನೆಯ ಲಿಯೋ ಸಿನಿಮಾದ ಟ್ರೈಲರ್ (Trailer) ನಿನ್ನೆ ಬಿಡುಗಡೆಯಾಗಿದೆ. ಅದ್ಧೂರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿತ್ತು. ಅದಕ್ಕೆ ಸರಕಾರ ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಮುಂದಾಗಿತ್ತು. ಅದರಂತೆ ಚೆನ್ನೈನ ರೋಹಿಣಿ ಚಿತ್ರಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ವಿಜಯ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಥಿಯೇಟರ್ ಗೆ ನುಗ್ಗಿದ್ದರು. ಟ್ರೈಲರ್ ಬಿಡುಗಡೆ ನಂತರ ಅಭಿಮಾನಿಗಳು ಗದ್ದಲ ಶುರು ಮಾಡಿದರು. ನಿಯಂತ್ರಣಕ್ಕೆ ಬಾರದೇ ಇದ್ದಾಗ ಚಿತ್ರಮಂದಿರದ ಕುರ್ಚಿಗಳನ್ನು ಮುರಿದು ಹಾಕಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿವೆ.
ಲಿಯೋ ಸಿನಿಮಾ ಇದೇ ಅಕ್ಟೋಬರ್ 19ರಂದು ದೇಶದಾದ್ಯಂತ ಬಿಡುಗಡೆ ಆಗುತ್ತಿದೆ. ಆದರೆ, ಕರ್ನಾಟಕ ಮತ್ತು ಕೇರಳದಲ್ಲಿ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾವೇರಿ (Cauvery) ನದಿ ನೀರಿನ ಹೋರಾಟ ಮತ್ತು ತಮಿಳು ಸಂಘಟನೆಗಳು ಕನ್ನಡ ಸಿನಿಮಾವನ್ನು ಬ್ಯಾನ್ ಮಾಡುವಂತಹ ಹೇಳಿಕೆಗಳ ಪರಿಣಾಮವಾಗಿ ‘ಲಿಯೋ’ ಸಿನಿಮಾ ಕನ್ನಡದಲ್ಲಿ (Karnataka) ಬಿಡುಗಡೆ ಆಗುತ್ತಾ ಎನ್ನುವ ಅನುಮಾನ ಶುರುವಾಗಿದೆ. ತಮಿಳಿನ ಖ್ಯಾತ ನಟ ವಿಜಯ್ ನಟನೆಯ ಈ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಆದರೆ ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ತಮಿಳು ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಲವರು ಆಗ್ರಹಿಸಿದ್ದಾರೆ. ಹೀಗಾಗಿ ಲಿಯೋ ಟೀಮ್ ಏನು ಮಾಡಲಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ದಳಪತಿ ವಿಜಯ್ (Vijay) ನಟನೆಯ, ಬಹುನಿರೀಕ್ಷಿತ ‘ಲಿಯೋ’ (Leo) ಸಿನಿಮಾವನ್ನು ಬೈಕಾಟ್ (Boycott) ಮಾಡಬೇಕು ಎನ್ನುವ ಕೂಗು ಕೇರಳದಲ್ಲಿ (Kerala) ಕೇಳಿ ಬರುತ್ತಿದೆ. ಲಿಯೋ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಬೇರೆ ಮಾಡಲಾಗುತ್ತಿದೆ. ಹೀಗಾಗಿ ಸಹಜವಾಗಿಯೇ ನಿರ್ಮಾಪಕರಿಗೆ ಆತಂಕ ಎದುರಾಗಿದೆ.
ತಮಿಳು ನಟ ವಿಜಯ್ ಮತ್ತು ಮಲಯಾಳಂ ನಟ ಮೋಹನ್ ಲಾಲ್ (Mohanlal) ಅಭಿಮಾನಿಗಳು ಯಾವಾಗಲೂ ಕಿತ್ತಾಡುತ್ತಿರುತ್ತಾರೆ. ಈ ಜೋಡಿ ನಟನೆಯ ‘ಜಿಲ್ಲಾ’ ಸಿನಿಮಾದ ಸಂದರ್ಭದಲ್ಲಿ ವಿಜಯ್ ಅಭಿಮಾನಿಯೊಬ್ಬ ಮೋಹನ್ ಲಾಲ್ ಅವರಿಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದ, ಅಲ್ಲಿಂದ ಈ ಇಬ್ಬರ ಫ್ಯಾನ್ಸ್ ವಾರ್ ಶುರುವಾಗಿತ್ತು. ವಿಜಯ್ ಸಿನಿಮಾ ರಿಲೀಸ್ ಗೆ ಬಂದಾಗೆಲ್ಲ ಬೈಕಾಟ್ ಕೂಗು ಕೇಳಿ ಬರುತ್ತದೆ.
‘ಲಿಯೋ’ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ, ಚಿತ್ರವನ್ನು ನಿರ್ಮಿಸುತ್ತಿರುವ 7 ಸ್ಕ್ರೀನ್ ಸ್ಟುಡಿಯೋ ಸಂಸ್ಥೆಯು, ಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆ ಮಾಡಿದೆ.
ತಮಿಳಿನ ಜನಪ್ರಿಯ ನಿರ್ದೇಶಕರಾದ ಲೋಕೇಶ್ ಕನಕರಾಜ್ ನಿರ್ದೇಶಿಸಿರುವ ‘ಲಿಯೋ’ ಚಿತ್ರದಲ್ಲಿ ‘ಇಳಯದಳಪತಿ’ ವಿಜಯ್, ತ್ರಿಷಾ, ಸಂಜಯ್ ದತ್, ಅರ್ಜುನ್ ಸರ್ಜಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ‘ಲಿಯೋ’ ಚಿತ್ರವು ಒಂದು ಅದ್ಭುತ ಅನುಭವ ನೀಡುವ ಚಿತ್ರವಾಗಿ ರೂಪುಗೊಂಡಿದ್ದು, ಇದರಲ್ಲಿ ಆಕ್ಷನ್, ಡ್ರಾಮಾ, ಎಮೋಷನ್ ಸೇರಿದಂತೆ ಎಲ್ಲಾ ಭಾಷೆಯ ಮತ್ತು ಪ್ರದೇಶದ ಜನರನ್ನು ಆಕರ್ಷಿಸುವಂತಹ ಅಂಶಗಳಿವೆ.
Web Stories