– ಧಾರವಾಡ ಉಪನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಧಾರವಾಡ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಗೋವುಗಳ ರಕ್ಷಣೆಗೆ ಮುಂದಾಗಿದ್ದ ಬಜರಂಗದಳದ ಕಾರ್ಯಕರ್ತ ಸೋಮಶೇಖರ್ ಎಂಬುವವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಹೇಳಿಬಂದಿದೆ. ಈ ಬೆನ್ನಲ್ಲೇ ಹಿಂದೂ-ಮುಸ್ಲಿಮ್ ಯುವಕರ ನಡುವೆ ಗಲಾಟೆಯೂ ನಡೆದಿದ್ದು ಕೆವಲರಿಗೆ ಗಾಯಗಳಾಗಿರುವ ಘಟನೆ ಧಾರವಾಡ ನಗರದ ಎಪಿಎಂಸಿ ಬಳಿ ನಡೆದಿದೆ.
ಹಲ್ಲೆಯನ್ನು ಖಂಡಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸೋಮಶೇಖರ್ ಅವರ ಮೇಲೆ ಹಲ್ಲೆ ಮಾಡಿದ ಅನ್ಯಕೋಮಿನ ಜನರನ್ನು ಬಂಧಿಸುವಂತೆ ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಉಪನಗರ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರಸಂಗವೂ ನಡೆಯಿತು.
ಇನ್ನು ಪ್ರತಿಭಟನೆಗೆ ಆಗಮಿಸಿದ ಧಾರವಾಡ ಶಾಸಕ ಅರವಿಂದ ಬೆಲ್ಲದ್, ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರನ್ನು ನಾಳೆವರೆಗೆ ಬಂಧಿಸದೇ ಇದ್ದರೆ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸದ್ಯ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ, ನಾಳೆ ಬೆಳಗಿನವರೆಗೂ ನಾವು ಕಾದು ನೋಡುತ್ತೇವೆ, ಆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬೆಲ್ಲದ್ ತಿಳಿಸಿದರು.
ನಂತರ ಮಾತನಾಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಎರಡು ಕೋಮಿನವರ ಮಧ್ಯೆ ಗಲಾಟೆಯಾಗಿದೆ. ಇಬ್ಬರು ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ, ಈ ಸಂಬಂಧ ಅವರು ದೂರು ದಾಖಲಿಸಿದ್ದಾರೆ. ಆ ಪ್ರಕಾರ ಎಫ್‌ಐಆರ್ ದಾಖಲಿಸಿಕೊಳ್ಳುತ್ತೇವೆ. ದೂರಿನಲ್ಲಿ ಇಬ್ಬರ ಹೆಸರಿನ ಜೊತೆಗೆ ಇನ್ನಷ್ಟು ಜನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಾದ ಏರಿಯಾದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ, ಅದನ್ನೆಲ್ಲ ಪರಿಶೀಲಿಸಿ ನಾವು ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.