– ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ರಾಯಚೂರು: ಲಾರಿ ಅಪಘಾತದಲ್ಲಿ ಕಬ್ಬಿಣದ ಸರಳು ಎದೆಯೊಳಗೆ ಹೊಕ್ಕಿ ಹೊರಬಂದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರ ತಂಡದ ಸತತ ಒಂದೂವರೆ ಗಂಟೆಯ ಶಸ್ತ್ರಚಿಕಿತ್ಸೆಯಿಂದ ಚಾಲಕ ಕೋಟೇಶ್ವರ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯವಾಡ ಮೂಲದ ಕೋಟೇಶ್ವರ ರಾವ್ ಚಲಾಯಿಸುತ್ತಿದ್ದ ಲಾರಿ ಗುರುಮಿಠಕಲ್ ಬಳಿ ರಾತ್ರಿ ವೇಳೆ ಅಪಘಾತಕ್ಕೀಡಾಗಿತ್ತು. ಈ ವೇಳೆ ಕಬ್ಬಿಣದ ಹಾರೆ ರೀತಿಯ ಸರಳು ಕೋಟೇಶ್ವರ ಅವರ ದೇಹದೊಳಗೆ ಹೊಕ್ಕಿತ್ತು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಮಾಡಲು ವೈದ್ಯರಿಂದ ಸಾಧ್ಯವಾಗಿಲ್ಲ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಕೂಡಲೇ ಸ್ಪಂದಿಸಿದ ಜನರಲ್ ಸರ್ಜನ್ ಡಾ. ವಿಜಯ್ ರಾಥೋಡ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
Advertisement
Advertisement
ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಕೋಟೇಶ್ವರ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ವೈದ್ಯರ ತಂಡ ಸಂತಸ ವ್ಯಕ್ತಪಡಿಸಿದೆ. ರಿಮ್ಸ್ ಆಸ್ಪತ್ರೆ ಅಂದರೆ ಮೂಗುಮುರಿಯುತ್ತಿದ್ದ ಸಾರ್ವಜನಿಕರು ಸಹ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಡಾ.ವಿಜಯ್ ರಾಥೋಡ್ ನೇತೃತ್ವದ ತಂಡ ಮೂರು ವರ್ಷದ ಕೆಳಗೆ ಇದೇ ರೀತಿಯ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದರು. ಗ್ರಾನೈಟ್ ಸ್ಫೋಟದ ವೇಳೆ ವ್ಯಕ್ತಿಯೋರ್ವನ ದೇಹದೊಳಗೆ ಹೊಕ್ಕಿದ್ದ ಒಂದು ಕೆ.ಜಿ ತೂಕದ ಕಲ್ಲನ್ನ ಯಶಸ್ವಿಯಾಗಿ ಹೊರತೆಗೆದಿದ್ದರು. ಅದಾದ ಬಳಿಕ ಕೋಟೇಶ್ವರ ಅವರ ಪ್ರಕರಣವೇ ಅತ್ಯಂತ ಕ್ಲಿಷ್ಟಕರವಾಗಿತ್ತು ಎಂದು ಡಾ. ವಿಜಯ್ ರಾಥೋಡ್ ಹೇಳಿದ್ದಾರೆ.