DistrictsKarnatakaLatestMain PostRaichur

ಖಾಸಗಿ ಆಸ್ಪತ್ರೆ ವೈದ್ಯರು ಕೈಬಿಟ್ಟರೂ ಬಾಲಕನನ್ನ ಬದುಕಿಸಿದ ರಿಮ್ಸ್ ವೈದ್ಯರು

Advertisements

ರಾಯಚೂರು: ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಅದೊಂದು ರೀತಿಯ ಅನುಮಾನ, ಆತಂಕ ಜನರಲ್ಲಿ ಇದೆ. ಹೀಗಾಗಿ ಎಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮೊರೆ ಹೋಗ್ತಾರೆ. ಆದ್ರೆ ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಗಳು ಕೈ ಚೆಲ್ಲಿದ ರೋಗಿಯ ಜೀವ ಉಳಿಸಿದ್ದಾರೆ. ಇವನು ಬದುಕಲು ಸಾಧ್ಯವೇ ಇಲ್ಲ ಅಂತ ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದ ರೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಈಗ ಸಂಪೂರ್ಣ ಗುಣಮುಖನಾಗಿದ್ದಾನೆ.

ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದ 12 ವರ್ಷದ ಬಾಲಕ ರಾಮು ಶಾಲೆಯಲ್ಲಿ ಆಟವಾಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಅಷ್ಟೇ. ಆದ್ರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಒಂದೆರಡು ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರು ಯಾವುದೇ ಪ್ರಯೋಜನವಾಗಲಿಲ್ಲ. ಐದು ದಿನಗಳಲ್ಲಿ ಈ ಬಾಲಕ ಉಳಿಯುವುದು ಕಷ್ಟ ಹೈದ್ರಾಬಾದ್, ಇಲ್ಲಾ ಬೆಂಗಳೂರಿನ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಅಂತ ವೈದ್ಯರು ಹೇಳಿದ್ದರು. ಆದ್ರೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಾಲಕನ ತಂದೆ ಹನುಮಂತ ದಿಕ್ಕುಕಾಣದಾಗಿ ರಿಮ್ಸ್ ಆಸ್ಪತ್ರೆಗೆ ಮಗನನ್ನ ದಾಖಲಿಸಿದ್ದರು. ಇದನ್ನೂ ಓದಿ: ಹುಬ್ಬಳ್ಳಿ ವ್ಯಕ್ತಿಯ ದೇಹದಿಂದ 156 ಕಿಡ್ನಿ ಸ್ಟೋನ್ಸ್ ತೆಗೆದ ವೈದ್ಯರು

ಉಸಿರಾಟ ತೊಂದರೆ, ಜ್ವರ, ಸಂಧಿ ನೋವಿನಿಂದ ಬಳಲುತ್ತಿದ್ದ ಬಾಲಕನಿಗೆ ಡಿಸೆಮ್ನಿಟಿ ಸ್ಟಿಪ್ನಫೋಕಲ್ ಸೆಪ್ಟಿಸಿವಿಯಾ ಅನ್ನೊ ವಿಚಿತ್ರ ಕಾಯಿಲೆಯಿದೆ ಅಂತ ರಿಮ್ಸ್ ವೈದ್ಯರು ಪತ್ತೆಹಚ್ಚಿ ಪಕ್ಕೆ, ಹೃದಯ, ಸಂಧಿಯಲ್ಲಿ ತುಂಬಿದ್ದ ಕೀವು ತೆಗೆದು ಚಿಕಿತ್ಸೆ ನೀಡಿ ಸತತ 24 ದಿನಗಳ ಚಿಕಿತ್ಸೆ ಬಳಿಕ ಗುಣಮುಖ ಮಾಡಿದ್ದಾರೆ.

ಚೆಸ್ಟ್ ಎಕ್ಸ್ ರೇ, ಸಿ ಟಿ ಸ್ಕ್ಯಾನ್, 2ಡಿ ಎಕೋ, ರಕ್ತ ಪರೀಕ್ಷೆ ಮೂಲಕ ಸಮಸ್ಯೆ ತಿಳಿದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅತೀ ಗಂಭೀರ ಸ್ವರೂಪದ ಈ ಕಾಯಿಲೆಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದಕ್ಕೆ ರೋಗಿಗಳು ಬದುಕುಳಿಯುವುದು ಅಸಾಧ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ಸಿಕ್ಕರೂ ಕನಿಷ್ಠ 8 ರಿಂದ 10 ಲಕ್ಷ ರೂ. ಖರ್ಚಾಗುತ್ತದೆ. ಆದರೆ ರಿಮ್ಸ್ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಿ ಬಾಲಕನನ್ನ ಗುಣಪಡಿಸಲಾಗಿದೆ. ಮಗನನ್ನ ಕಳೆದುಕೊಂಡೆವು ಅಂತ ಕಣ್ಣೀರಿಡುತ್ತಿದ್ದ ಪೋಷಕರು ಇಲ್ಲಿನ ವೈದ್ಯರು ನಮ್ಮ ಪಾಲಿನ ದೇವರು ಅಂತ ಸ್ಮರಿಸುತ್ತಿದ್ದಾರೆ.

ಒಟ್ನಲ್ಲಿ, ನಾನಾ ಆರೋಪಗಳನ್ನ ಎದುರಿಸುತ್ತಿರುವ ರಾಯಚೂರಿನ ರಿಮ್ಸ್ ಆಸ್ಪತ್ರೆ ಈ ರೋಗಿಯ ವಿಷಯದಲ್ಲಿ ಮಾತ್ರ ನಿಜಕ್ಕೂ ವೃತ್ತಿಪರತೆಯನ್ನ ಮೆರೆದಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಉಪಕರಣಗಳನ್ನ ಸಮರ್ಪಕವಾಗಿ ಬಳಸಿಕೊಂಡು ಬಾಲಕನ ಪ್ರಾಣವನ್ನ ಉಳಿಸಿದ್ದಾರೆ. ರಿಮ್ಸ್ ಆಸ್ಪತ್ರೆ ಜಿಲ್ಲೆಯ ಜನತೆಗೆ ಇದೇ ರೀತಿ ವರದಾನವಾಗಲಿ ಅನ್ನೋದೆ ಎಲ್ಲರ ಆಶಯ. ಇದನ್ನೂ ಓದಿ:  16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

Leave a Reply

Your email address will not be published.

Back to top button