ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಯಡಿಯೂರಪ್ಪ ನಡುವೆ ಕಾದಾಟ ನಿರ್ಮಾಣವಾಗಿದೆ. ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಸಿಎಂ ಯಡಿಯೂರಪ್ಪಗೆ ಸಮಯಾವಕಾಶ ನೀಡದೇ ಆಡವಾಡಿಸುತ್ತಿರುವ ಬಿಜೆಪಿ ಹೈಕಮಾಂಡ್ ನಡೆ ಈ ಅನುಮಾನಕ್ಕೆ ಪುಷ್ಠಿ ನೀಡಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವ ಸಂದೇಶವನ್ನು ಪಕ್ಷದೊಳಗೆ ಸಾರಲು ಯತ್ನಿಸುತ್ತಿರುವ ಬಿಜೆಪಿ ವರಿಷ್ಠರು, ಹಿರಿಯ ರಾಜಕಾರಣಿ ಯಡಿಯೂರಪ್ಪ ಅವರ ತಾಳ್ಮೆ ಪರೀಕ್ಷೆಗೆ ಇಳಿದಂತಿದೆ.
ಈ ಹಿಂದೆಯೂ ಹಲವು ಬಾರಿ ಬಿಜೆಪಿ ನಾಯಕರು ಯಡಿಯೂರಪ್ಪ ಅವರ ತಾಳ್ಮೆ ಪರೀಕ್ಷೆಗೆ ಯತ್ನಿಸಿ ಕೈಸುಟ್ಟುಕೊಂಡಿದ್ದು ಉಂಟು. ಒಂದೊಮ್ಮೆ ಹೈಕಮಾಂಡ್ ದುರ್ಬಲವಾಗಿದ್ದಾಗ ಯಡಿಯೂರಪ್ಪ ಅವರದ್ದೇ ಮೇಲುಗೈ ಆಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪಕ್ಷ ಬಲಿಷ್ಠವಾಗಿ ಬೆಳೆದ ಪರಿಣಾಮ ಹೈಕಮಾಂಡ್ ಸ್ಟ್ರಾಂಗ್ ಆಗಿದೆ. ಹಾಗಂತ ಯಡಿಯೂರಪ್ಪ ವೀಕ್ ಆಗಿದ್ದಾರೆ ಅಂತ ಅಲ್ಲ. ಕಠಿಣವಾಗಿರುವ ವರಿಷ್ಠರ ನಡೆ, ಬಿಎಸ್‍ವೈ ಅವರನ್ನು ದುರ್ಬಲ ಮಾಡತೊಡಗಿದಂತೆ ಭಾಸವಾಗುತ್ತಿದೆಯಲ್ಲದೇ, ಅನಿವಾರ್ಯವಾಗಿ ಅವರು ಶರಣಾಗುವಂತೆ ಮಾಡುತ್ತಿರುವುದಂತೂ ಸತ್ಯ.
ಹುಟ್ಟು ಹೋರಾಟಗಾರರಾಗಿರುವ ಬಿಎಸ್‍ವೈ, ರಾಜ್ಯದಲ್ಲಿ ಪಕ್ಷವನ್ನು ಶೂನ್ಯದಿಂದ ಕಟ್ಟಿ ಬೆಳೆಸಿ ಇಲ್ಲಿಯವರೆಗೆ ತಂದಿರುವುದು ಇತಿಹಾಸ. ಬಿಎಸ್‍ವೈ ದೇಶ ಹಾಗೂ ರಾಜ್ಯದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ನಾಯಕರ ಪೈಕಿ ಎಲ್ಲರಿಗಿಂತ ಹಿರಿಯರಲ್ಲಿ ಒಬ್ಬರು ಮತ್ತು ಪ್ರಮುಖರು. ದೇಶದಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿರುವ ಅಮಿತ್ ಶಾ, ಅಧಿಕಾರದ ನೇತೃತ್ವ ವಹಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗಿಂತಲೂ ಪಕ್ಷದಲ್ಲಿ ಯಡಿಯೂರಪ್ಪ ಹಿರಿಯರು ಮತ್ತು ಅನುಭವಿ. ಆದ್ರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ತಮಗಿಂತ ಕಿರಿಯರ ಮುಂದೆಯೇ ಮಂಡಿಯೂರುವ ಸ್ಥಿತಿ ಯಡಿಯೂರಪ್ಪ ಅವರಿಗೆ ಬಂದಿರುವುದು ವಿಪರ್ಯಾಸ.
ಕೊಟ್ಟ ಮಾತು ಉಳಿಸಿಕೊಳ್ಳುವುದರಲ್ಲಿ ಸಿಎಂ ಯಡಿಯೂರಪ್ಪ ಅವರದ್ದು ಎತ್ತಿದ ಕೈ. ರಾಜ್ಯ ರಾಜಕಾರಣದಲ್ಲಿ ಅವರು ಅಂತಹ ಒಂದು ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂಬುದು ಬಿಜೆಪಿ ಪಡಸಾಲೆಯ ನಂಬಿಕೆ. ರಾಜ್ಯದಲ್ಲಿ ಪಕ್ಷ ಕಟ್ಟಲು ಮತ್ತು ಅಧಿಕಾರದ ಚುಕ್ಕಾಣಿ ಹಿಡಿಯಲು ಯಡಿಯೂರಪ್ಪ ಕೊಡುಗೆ ಅಪಾರ. ಅಂತಹ ಬೆಳವಣಿಗೆಯಲ್ಲಿ ಸಹಜವಾಗಿ ಅವರು ಕೆಲವೊಂದು ಭರವಸೆಗಳನ್ನು ನೀಡಿರುವ ಸಾಧ್ಯತೆಯಿದೆ. ಈಗ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಸ್ಪಷ್ಟವಾಗಿದೆ. ಎಲ್ಲಿ ತಮ್ಮ ವರ್ಚಸ್ಸಿಗೆ ಧಕ್ಕೆ ಆಗುತ್ತೆ ಎನ್ನುವ ಆತಂಕ ಅವರಲ್ಲಿ ಮನೆ ಮಾಡಿರುವುದಂತೂ ಸತ್ಯ. ಸಿಡುಕು ಸ್ವಭಾವದ ಯಡಿಯೂರಪ್ಪ ಪಕ್ಷದ ವರಿಷ್ಠರು ಇಷ್ಟೆಲ್ಲಾ ಕಿರುಕುಳ ಕೊಡುತ್ತಿದ್ದರೂ ಮೌನ ವಹಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಅದಕ್ಕೆ ಅವರ ಬಳಿ ಸಕಾರಣಗಳಿರಬಹುದು. ಆದರೆ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ, ಯಡಿಯೂರಪ್ಪ ಅವರ ಕುದಿಮೌನ ಯಾವಾಗ ಸ್ಫೋಟವಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ತಾಳ್ಮೆಗೂ ಒಂದು ಮಿತಿ ಇರುತ್ತದೆ. ಹಾಗಂತ, ಮಿತಿಮೀರಿ ವರಿಷ್ಠರ ತಾಳಕ್ಕೆ ತಕ್ಕಂತೆ ಕುಣಿಯಲು ಯಡಿಯೂರಪ್ಪ ಮುಂದಾಗಲ್ಲ ಅನ್ನೋದೆ ಅವರ ಅಭಿಮಾನಿಗಳ ನಂಬಿಕೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಯಡಿಯೂರಪ್ಪ ಅವರಿಗೆ ಈಗ ಸವಾಲಾಗಿದೆ. ಆದರೆ ತನ್ನದೇ ನಿಲುವಿಗೆ ಅಂಟಿಕೊಂಡಿರುವ ಬಿಜೆಪಿ ಹೈಕಮಾಂಡ್ ಈ ಗೊಂದಲವನ್ನು ಹೇಗೆ ಬಗೆಹರಿಸುತ್ತದೆ ಎನ್ನುವುದೇ ಕುತೂಹಲ. ಬಂಡಾಯವೆದ್ದು ಬಂದು ಪಕ್ಷ ಸೇರಿ ಸರ್ಕಾರ ರಚನೆಗೆ ಕಾರಣರಾದವರೆಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂಬುದು ಯಡಿಯೂರಪ್ಪ ಬಯಕೆ. ಹಾಗಾದ್ರೆ ಪಕ್ಷ ಕಟ್ಟಿದ ಮೂಲನಿವಾಸಿಗಳು ಮುನಿಸಿಕೊಂಡು ಪಕ್ಷಕ್ಕೆ ಹಿನ್ನಡೆಯಾಗಬಹುದು. ಕೆಲವು ಹಳಬರಿಗೆ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವಕಾಶ ನೀಡಿ ತೇಪೆ ಹಚ್ಚಲೇಬೇಕು ಎಂಬುದು ಪಕ್ಷದ ವರಿಷ್ಠರ ನಿಲುವು. ಈ ಭಿನ್ನಾಭಿಪ್ರಾಯದ ಫಲವೇ ಈ ಮುಸುಕಿನ ಗುದ್ದಾಟ.
ಚುನಾವಣೆ ನಡೆದು ಫಲಿತಾಂಶ ಬಂದ ತಕ್ಷಣ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಅರ್ಹ ಶಾಸಕರಿಗೆ ಈಗ ಪ್ರತಿನಿತ್ಯ ಟೆನ್ಷನ್. ಹೈಕಮಾಂಡ್ ಮತ್ತು ಬಿಎಸ್‍ವೈ ಜಟಾಪಟಿಯ ಫಲವಾಗಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಲೇ ಇದೆ. ಶೂನ್ಯ ಮಾಸ ಮುಗಿದ ತಕ್ಷಣ ಅಂದ್ರೆ ಸಂಕ್ರಾಂತಿ ಮರುದಿನವೇ ಮುಹೂರ್ತ ಎಂದು ಭರವಸೆ ನೀಡಿದ್ದ ಯಡಿಯೂರಪ್ಪ ಈಗ ಮಾತಿಗೆ ತಪ್ಪುವಂತಾಗಿದೆ. ಭೇಟಿಗೆ ಅವಕಾಶ ನೀಡದೇ ವರಿಷ್ಠರು ಸತಾಯಿಸುತ್ತಿರುವುದು ಒಂದು ಕಡೆ, ದಾವೋಸ್ ಪ್ರವಾಸ ಮುಗಿಸಿ ಬಂದ ಬಳಿಕವಷ್ಟೇ ವಿಸ್ತರಣೆ ಅನ್ನೋದು ಈಗಿನ ವಿದ್ಯಮಾನ. ದೆಹಲಿಗೆ ಬರಲು ಬಿಡದ ಅಮಿತ್ ಶಾ ರಾಜ್ಯ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸ್ತಾರೆ ಅನ್ನೋದೇ ಅನುಮಾನ. ಹಾಗಾಗಿ ಸಂಪುಟ ವಿಸ್ತರಣೆ ಚರ್ಚೆಯೇ ಬಿಎಸ್‍ವೈ ವಿದೇಶ ಪ್ರವಾಸದ ಬಳಿಕ ಆದರೂ ಅಚ್ಚರಿ ಪಡಬೇಕಿಲ್ಲ. ಅಂದ್ರೆ ಒಂದೊಂದು ಕಾರಣ, ನೆಪದ ಫಲವಾಗಿ ಸಂಪುಟ ವಿಸ್ತರಣೆ ಮರೀಚಿಕೆಯಾಗುತ್ತಿರುವುದಂತೂ ಸತ್ಯ. ಒಟ್ಟಿನಲ್ಲಿ ಈ ಹಗ್ಗಜಗ್ಗಾಟದಲ್ಲಿ ಬಿಎಸ್‍ವೈ ಮೇಲುಗೈ ಸಾಧಿಸ್ತಾರಾ ಅಥವಾ ಪಕ್ಷದ ನಿಲುವಿಗೆ ಮೇಲುಗೈ ಆಗುತ್ತಾ ಅನ್ನೋದು ಮಾತ್ರ ಸದ್ಯಕ್ಕೆ ಉಳಿದಿರುವ ಕುತೂಹಲ.