ವಿಜಯಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮತ್ತೆ ಭೀಮಾನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಆಲಮೇಲ ತಾಲೂಕಿನ ತಾರಾಪುರ ಗ್ರಾಮ ಜಲಾವೃತಗೊಂಡಿದ್ದು, ನೀರು ನುಗ್ಗಿರುವ ರಸ್ತೆಯ ಮೇಲೆ ಸವಾರರೊಬ್ಬರು ಬೈಕ್ ಅನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ಉಜನಿ ಜಲಾಶಯದಿಂದ ಭೀಮಾನದಿಗೆ 28 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ನದಿ ನೀರು ತಾರಾಪುರ ಗ್ರಾಮಕ್ಕೆ ನುಗ್ಗಿದ ಪರಿಣಾಮ ಗ್ರಾಮ ಮತ್ತೆ ಜಲಾವೃತವಾಗಿದೆ. ನೀರು ನುಗ್ಗಿರುವ ಹಿನ್ನೆಲೆ ಸೇತುವೆ ಮುಳಗಡೆಯಾಗಿ ತಾರಾಪುರ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ನೀರಿನಲ್ಲಿ ವ್ಯಕ್ತಿಯೊಬ್ಬ ಹೆಗಲಮೇಲೆ ಬೈಕ್ ಹೊತ್ತುಕೊಂಡು ಸಾಗಿದ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಕಳೆದ ತಿಂಗಳ ಪ್ರವಾಹದಿಂದ ಗ್ರಾಮದಲ್ಲಿ ಸಾಕಷ್ಟು ಅನಾಹುತಗಳು ಆಗಿವೆ. ಅದರಿಂದಲೇ ಇನ್ನೂ ಅಲ್ಲಿನ ಗ್ರಾಮಸ್ಥರು ಸುಧಾರಿಸಿಕೊಂಡಿಲ್ಲ. ಅಷ್ಟರಲ್ಲಿ ಮತ್ತೆ ಗ್ರಾಮಕ್ಕೆ ನೀರು ನುಗ್ಗಿದೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿಲ್ಲ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ತಾರಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.