Connect with us

Bengaluru City

ರೈಸ್ ಪುಲ್ಲಿಂಗ್ ದಂಧೆಗೆ ಸಿಎಂ ಹೆಸರು ಬಳಸಿ 25 ಕೋಟಿ ರೂ. ವಂಚನೆ

Published

on

ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರು ಹೇಳಿಕೊಂಡು ಸಾರ್ವಜನಿಕರಿಗೆ 25 ಕೋಟಿ ರೂ. ವಂಚಿಸಿದ್ದ ವ್ಯಕ್ತಿಯೊಬ್ಬ ವಿಷ ಕುಡಿದು ನಾಟಕವಾಡಿದ ಘಟನೆ ಆನೇಕಲ್ ತಾಲೂಕಿನ ಚೂಡೇನಹಳ್ಳಿಯಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ತಾವರೆಕೆರೆ ನಿವಾಸಿ ರಾಮಚಂದ್ರಾಚಾರಿ ರೈಸ್ ಪುಲ್ಲಿಂಗ್‍ಗೆ ಹಣ ತೊಡಗಿಸಿದರೆ, ಒಂದಕ್ಕೆ ಹತ್ತರಷ್ಟು ಹೆಚ್ಚು ಹಣ ನೀಡುತ್ತೇನೆ ಎಂದು ಹೇಳಿ 250ಕ್ಕೂ ಹೆಚ್ಚು ಜನರಿಂದ ಹಣ ಪಡೆದು ವಂಚಿಸಿದ್ದಾನೆ.

ವಂಚನೆ ಹೇಗೆ?
ನಮಗೆ ನಿಧಿ ಸಿಕ್ಕಿದ್ದು, ಅದನ್ನು ಮಾರಾಟ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನಗೆ 8,080 ಕೋಟಿ ರೂ. ನೀಡಬೇಕಿದೆ. ಅವರು ಜೊತೆ ಮಾಡಿಕೊಂಡ ಒಪ್ಪಂದ ಬಾಂಡ್ ಪೇಪರ್ ನನ್ನ ಬಳಿಗೆ ಇದೆ ಅಂತ ರಾಮಚಂದ್ರಚಾರಿ ತೋರಿಸಿ, ನೀವು ನೀಡಿದ ಹಣಕ್ಕೆ ಹತ್ತುಪಟ್ಟು ಹಣ ವಾಪಾಸ್ ನೀಡುತ್ತೇನೆ ಎಂದು ಜನರಿಗೆ ಹೇಳಿದ್ದ.

ಹಣಕ್ಕಿಂತ ಹೆಚ್ಚು ಹಣ ಸಿಗುತ್ತದೆ ಎನ್ನವ ಆಸೆಗೆ ಬಿದ್ದ ಜನ ಆಭರಣ, ಸೈಟ್, ಆಸ್ತಿ ಮಾರಾಟ ಮಾಡಿ ಹಣ ನೀಡಿದ್ದಾರೆ. ಆದರೆ ಇದಕ್ಕೆ ಯಾವುದೇ ದಾಖಲೆ, ಲಿಖಿತ ಒಪ್ಪಂದ ಮಾಡಿಕೊಂಡಿರಲಿಲ್ಲ. ಕೆಲವರು ಮಾತ್ರ ರಾಮಚಂದ್ರಚಾರಿ ಜೊತೆಗಿನ ವ್ಯವಹಾರವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಹಣ ನೀಡುವವರು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ತೆರೆಯಬೇಕು. ಇದರಿಂದ ನಾವು ಹಣ ಮರಳಿ ನೀಡಲು ಸಹಾಯವಾಗುತ್ತದೆ ಎಂದು ರಾಮಚಂದ್ರಚಾರಿ ಹೇಳಿದ್ದಾನೆ. ಈತನ ಮಾತನ್ನು ಕೇಳಿ 350ಕ್ಕೂ ಹೆಚ್ಚು ಜನರು ಬ್ಯಾಂಕಿನಲ್ಲಿ ಖಾತೆ ತೆರೆದಿದ್ದಾರೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಇದಕ್ಕೂ ಮುನ್ನ ಹಿಂದೆ ರಾಮಚಂದ್ರಚಾರಿ ತಾವರೆಕೆರೆ ಸುತ್ತ ಮುತ್ತಲಿನ ಜನರಿಂದ ಹಣ ಪಡೆದಿದ್ದ. ಅಲ್ಲಿಂದ ಪರಾರಿಯಾಗಿ ಬಂದ ರಾಮಚಂದ್ರಚಾರಿ 20 ವರ್ಷಗಳಿಂದ ಆನೇಕಲ್‍ನ ಚೂಡೇನಹಳ್ಳಿಗೆ ವಾಸವಿದ್ದು, ಇಲ್ಲಿಯೂ ಸುಮ್ಮನಿರದ ರಾಮಚಂದ್ರಚಾರಿ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರನ್ನು ಬಳಿಸಿಕೊಂಡು ದಂಧೆ ನಡೆಸಿಕೊಂಡು ಬಂದಿದ್ದ. ಅಷ್ಟೇ ಅಲ್ಲದೆ ನನ್ನ ಜೊತೆಗೆ ಪ್ರಮುಖ ರಾಜಕಾರಣಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಸಹ ಇದ್ದಾರೆ ಎಂದು ಸಾರ್ವಜನಿಕರಿಗೆ ತಿಳಿಸಿ ತನ್ನ ಬಲೆಗೆ ಬೀಳಿಸಿದ್ದ.

ನಮ್ಮ ಹಣವನ್ನು ನಮಗೆ ವಾಪಾಸ್ ನೀಡಿ ಅಂತಾ ಅನೇಕರು ಕೇಳಿಕೊಂಡಿದ್ದರು. ಆದರೆ ನೋಟ್ ಬ್ಯಾನ್ ನೆಪ ಹೇಳಿ ರಾಮಚಂದ್ರಚಾರಿ ಕಾಲ ದೂಡುತ್ತಿದ್ದ. ಇತ್ತೀಚೆಗೆ ಹಣ ನೀಡಲೇ ಬೇಕು ಎಂದು ಜನ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ವಿಚಲಿತಗೊಂಡ ರಾಮಚಂದ್ರಚಾರಿ ಬುಧವಾರ ನೀಡುತ್ತೇನೆ ಮನೆಗೆ ಬನ್ನಿ ಅಂತಾ ಎಲ್ಲರಿಗೂ ತಿಳಿಸಿದ್ದ. ಇತ್ತ ಹಣ ನೀಡಿದ್ದ ಜನರು ಬರುತ್ತಿದ್ದಾರೆಂದು ಅರಿತ ರಾಮಚಂದ್ರಚಾರಿ ವಿಷ ಸೇವಿಸುವ ನಾಟಕವಾಡಿ ಈಗ ಆಸ್ಪತ್ರೆ ಸೇರಿದ್ದಾನೆ.

ಹಣ ವಂಚನೆ ಆರೋಪದಡಿ ರಾಮಚಂದ್ರಚಾರಿ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *