ಸಕ್ಕರೆ ನಾಡಲ್ಲಿ ನಿಲ್ಲದ ಪಡಿತರ ಅಕ್ಕಿ ಪಾಲಿಶ್ ದಂಧೆ

Public TV
2 Min Read
RICE MILL

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಅಕ್ಕಿ ಪಾಲಿಶ್ ದಂಧೆ ನಡೆಯುತ್ತಿದ್ದು, ಬಡವರ ಅಕ್ಕಿಗೆ ಕನ್ನ ಹಾಕಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಸಂಗ ಪದೇ ಪದೇ ಬೆಳಕಿಗೆ ಬರುತ್ತಿದೆ.

RICE MILL 4

ಪಡಿತರ ಅಕ್ಕಿ ಪಾಲಿಶ್ ಮಾಡಿ ಮಾರಾಟ ಮಾಡುತ್ತಿದ್ದು, ನಿರಂತರವಾಗಿ ರೈಸ್ ಮಿಲ್ ಮೇಲೆ ದಾಳಿ ನಡೆಸುತ್ತಿದ್ರೂ ಸಹ ಈ ದಂಧೆ ನಿಲ್ಲುತ್ತಿಲ್ಲ. ಇದೀಗ ಅಧಿಕಾರಿಗಳನ್ನೇ ದಾರಿ ತಪ್ಪಿಸಲು ರೈಸ್ ಮಿಲ್ ಮಾಲೀಕರು ಮುಂದಾಗಿದ್ದು, ಪಡಿತರ ಅಕ್ಕಿಯನ್ನು ಬೇರೆ ಚೀಲಗಳಿಗೆ ತುಂಬಿ ಯಾಮಾರಿಸುವ ಪ್ಲಾನ್ ಮಾಡುತ್ತಿದ್ದಾರೆ. ಚೀಲ ಬದಲಿಸುವ ಜೊತೆಗೆ ನಕಲಿ ಬಿಲ್ ಸೃಷ್ಟಿಸಿ ಹಾಡುಹಗಲೇ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ.

RICE MILL 3

ರೈಸ್ ಮಿಲ್ ಮಾಲೀಕರ ಕಳ್ಳಾಟ:
ಮಂಡ್ಯದ ಕಾಳೇಗೌಡ ರೈಸ್ ಮಿಲ್ ಮೇಲೆ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ದಾಳಿ ವೇಳೆ ಪತ್ತೆಯಾದ ಅಕ್ಕಿಯ ನಕಲಿ ಬಿಲ್‍ನ್ನು ರೈಸ್ ಮಿಲ್ ಮಾಲೀಕ ನೀಡಿದ್ದಾನೆ. ಬಿಲ್ ಪರಿಶೀಲನೆ ಮಾಡುವಂತೆ ಆಹಾರ ಇಲಾಖೆಗೆ ತಹಶೀಲ್ದಾರ್ ಅವರು ಮಾಹಿತಿ ನೀಡಿದ್ದಾರೆ. ಪರಿಶೀಲನೆಯಲ್ಲಿ ರೈಸ್ ಮಿಲ್ ನಲ್ಲಿ ಪತ್ತೆಯಾದ ಅಕ್ಕಿಗೂ, ಬಿಲ್ ಗೂ ತಾಳೆಯಾಗಿಲ್ಲ. ಹೀಗಾಗಿ ರೈಸ್ ಮಿಲ್ ಮಾಲೀಕನ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಗೆ ದೂರು ದಾಖಲಾಗಿದೆ. ಇದೀಗ ಅಕ್ಕಿ ತುಂಬಿದ್ದ ಕ್ಯಾಂಟರ್ ಮಾಲೀಕ ಹಾಗೂ ಚಾಲಕನ ವಿರುದ್ಧವು ಸಹ ದೂರು ದಾಖಲಾಗಿದ್ದು, ಈ ಪ್ರಕರಣ ಸಂಬಂಧ ಸದ್ಯ ಪೊಲೀಸರು ಮೂವರ ವಿರುದ್ಧ FIR ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮನೆಗಾಗಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟಿಸಿದ

RICE MILL 1

ಮಂಡ್ಯದಲ್ಲಿ ಅಕ್ಕಿ ದಂಧೆ ನಡೆಯೋದು ಹೇಗೆ?:
ಪಡಿತರ ಅಕ್ಕಿಯನ್ನು ರೈಸ್ ಮಿಲ್‍ಗೆ ತಂದು ಪಾಲಿಶ್ ಮಾಡಿ, ಸಣ್ಣ ಅಕ್ಕಿಯಾಗಿ ಪರಿವರ್ತಿಸಿ ನಕಲಿ ಬ್ರಾಂಡ್ ಹೆಸರಿನ ಚೀಲಗಳಿಗೆ ಪ್ಯಾಕಿಂಗ್ ಮಾಡಲಾಗುತ್ತದೆ. ಅದೇ ಅಕ್ಕಿಯನ್ನು ಹೊರ ರಾಜ್ಯ ಮಾತ್ರವಲ್ಲದೇ ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಕಡಿಮೆ ದರದಲ್ಲಿ ಪಡಿತರ ಅಕ್ಕಿ ತಂದು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಕಳೆದ ತಿಂಗಳಷ್ಟೇ ಮಂಡ್ಯದ ಸ್ವರ್ಣ ಸಂದ್ರ ಬಡಾವಣೆಯ ಲಕ್ಷ್ಮಿ ದೇವಿ ರೈಸ್ ಮಿಲ್‍ನಲ್ಲಿ 100 ಟನ್ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ನಿರಂತರವಾಗಿ ದಾಳಿ ಮಾಡುತ್ತಿದ್ದರು ಸಹ ಅಕ್ರಮ ಅಕ್ಕಿ ದಂಧೆಯನ್ನು ಮಾತ್ರ ತಡೆಯಲು ಆಗುತ್ತಿಲ್ಲ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

RICE MILL 2

ಅಧಿಕಾರಿಗಳ ವಿರುದ್ಧ ರೈಸ್ ಮಿಲ್ ಮಾಲೀಕರ ಪ್ರತಿಭಟನೆ:
ಒಂದು ಕಡೆ ಅಧಿಕಾರಿಗಳು ದಾಳಿ ನಡೆಸಿ ಪಡಿತರ ಅಕ್ಕಿ ದಂಧೆಯನ್ನು ಪತ್ತೆ ಹಚ್ಚಿದ್ದರೆ, ಮತ್ತೊಂದೆಡೆ ದುರುದ್ದೇಶದಿಂದ ದಾಳಿ ನಡೆಸುತ್ತಿದ್ದಾರೆ ಎಂದು ರೈಸ್ ಮಿಲ್ ಮಾಲೀಕರು ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ವ್ಯಾಪಾರ ಮಾಡ್ತಿದ್ರು ಸಹ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು, ಪದೇ ಪದೇ ರೈಸ್ ಮಿಲ್‍ಗಳ ಮೇಲೆ ದಾಳಿ ನಡೆಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಲ್ಲಸಲ್ಲದ ಕೇಸ್ ಹಾಕಿ ದಬ್ಬಾಳಿಕೆ ಮಾಡುತ್ತಿದ್ದು, ಅಕ್ಕಿ ಗಿರಣಿ ಮಾಲೀಕರ ಮೇಲೆ ದೌರ್ಜನ್ಯ ನಡೆಸಿ ಗೌರವಕ್ಕೆ ದಕ್ಕೆ ಉಂಟು ಮಾಡುತ್ತಿದ್ದು, ತಕ್ಷಣವೇ ಸರ್ಕಾರ ದಬ್ಬಾಳಿಕೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.  ಇದನ್ನೂ ಓದಿ:  ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ

Share This Article
Leave a Comment

Leave a Reply

Your email address will not be published. Required fields are marked *