– ಸುಶಾಂತ್ ಸಿಂಗ್ ಆತ್ಮಹತ್ಯೆಗೂ 6 ದಿನ ಮೊದಲು ಅಪಾರ್ಟ್ಮೆಂಟ್‌ನಿಂದ ಹೋಗಿದ್ದ ರಿಯಾ ಚಕ್ರವರ್ತಿ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಆತ್ಮಹತ್ಯೆ ಕೇಸಲ್ಲಿ ಗೆಳತಿ-ನಟಿ ರಿಯಾ ಚಕ್ರವರ್ತಿಗೆ (Rhea Chakraborty) ಸಿಬಿಐ ಕ್ಲೀನ್‌ಚಿಟ್ ಕೊಟ್ಟಿದೆ.
ಪಾಟ್ನಾದ ಕೋರ್ಟ್‌ಗೆ ಸಿಬಿಐ (CBI) ಸಲ್ಲಿಸಿದ್ದ ಕ್ಲೋಸರ್ ರಿಪೋರ್ಟ್‌ನ ಅಂಶಗಳು ಬೆಳಕಿಗೆ ಬಂದಿವೆ. 6 ದಿನಗಳ ಮೊದಲೇ ರಿಯಾ ಅಪಾರ್ಟ್ಮೆಂಟ್‌ನಿಂದ ಹೊರಟಿದ್ದರು. ಹಣಕಾಸಿನ ಯಾವುದೇ ಅವ್ಯವಹಾರ ನಡೆದಿಲ್ಲ ಅಂತ ಉಲ್ಲೇಖಿಸಿದೆ.ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಯಾರೂ ಪ್ರಚೋದನೆ ಮಾಡಿಲ್ಲ: ಅಂತಿಮ ವರದಿ ಸಲ್ಲಿಸಿದ ಸಿಬಿಐ
2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ಅವರು ರಿಯಾ ಚಕ್ರವರ್ತಿ ಮೇಲೆ ಆರೋಪ ಹೊರಿಸಿದ್ದರು. ಇದೀಗ ಸಿಬಿಐ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್ ನೀಡಿದೆ. ಆದರೆ ಸಿಬಿಐ ರಿಪೋರ್ಟ್‌ಗೆ ಸುಶಾಂತ್ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಬಿಐ ಅಂತಿಮ ವರದಿಯ 5 ಪ್ರಮುಖ ಅಂಶಗಳೇನು?
1. ಸುಶಾಂತ್ ಸಿಂಗ್ ಆತ್ಮಹತ್ಯೆಗೂ 6 ದಿನಗಳ ಮೊದಲೇ ಅಂದರೆ 2020ರ ಜೂ.8ರಂದು ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ಸುಶಾಂತ್ ಸಿಂಗ್ ಫ್ಲ್ಯಾಟ್‌ನಿಂದ ಹೊರಟಿದ್ದರು. ಅದಾದ ಬಳಿಕ ಅರ‍್ಯಾರು ಸುಶಾಂತ್‌ನ್ನು ಭೇಟಿಯಾಗಿಲ್ಲ. ಅದಲ್ಲದೇ ಜೂ.8ರಿಂದ ಜೂ.14ರ ಮಧ್ಯೆ ಆರೋಪಿಗಳ ಪೈಕಿ ಯಾರೂ ಕೂಡ ಸುಶಾಂತ್ ಜೊತೆ ಇರಲಿಲ್ಲ. ರಿಯಾ ಚಕ್ರವರ್ತಿ ಹೋದ ನಂತರ, ಜೂ.10ರಂದು ಶೋವಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ನಡುವೆ ಒಂದೇ ಒಂದು ವಾಟ್ಸಪ್ ಮೆಸೇಜ್ ಬಿಟ್ಟರೆ, ಅವರಿಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ.
2 ಸುಶಾಂತ್ ಸಹೋದರಿ ಮೀತು ಸಿಂಗ್ ಜೂ.8ರಿಂದ ಜೂ.12ರವರೆಗೆ ಸುಶಾಂತ್ ಅವರೊಂದಿಗಿದ್ದರು. ಇನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಮ್ಯಾನೇಜರ್ ಶ್ರುತಿ ಮೋದಿ 2020ರ ಫೆಬ್ರವರಿಯಿಂದ ಕಾಲಿಗೆ ಗಾಯವಾದ ಕಾರಣ ಸುಶಾಂತ್ ಅವರ ಮನೆಗೆ ಬಂದಿರಲಿಲ್ಲ.
3. ರಿಯಾ ಚಕ್ರವರ್ತಿ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಕೆಲವು ವಸ್ತುಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದರ ಆಧಾರದ ಮೇಲೆ ತನಿಖೆ ಮಾಡಿದಾಗ ಸುಶಾಂತ್ ಅವರು ಉಡುಗೊರೆಯಾಗಿ ನೀಡಿದ್ದ ಆಪಲ್ ಲ್ಯಾಪ್‌ಟಾಪ್ ಮತ್ತು ವಾಚ್‌ನ್ನು ಮಾತ್ರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಹೊರತಾಗಿ ಯಾವುದೇ ಹಣಕಾಸಿನ ಯಾವುದೇ ಅವ್ಯವಹಾರ ನಡೆದಿರುವುದಕ್ಕೆ ಪುರಾವೆಗಳಿಲ್ಲ.
4. ವರದಿಗಳ ಪ್ರಕಾರ 2019ರ ಏಪ್ರಿಲ್‌ನಿಂದ ರಿಯಾ ಹಾಗೂ ಸುಶಾಂತ್ ಅವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಅದಾದ ಬಳಿಕ ಸುಶಾಂತ್ ಅವರೇ ರಿಯಾ ನಮ್ಮ ಕುಟುಂಬದ ಭಾಗ ಎಂದು ಹೇಳಿಕೊಂಡಿದ್ದರು. ಅದಲ್ಲದೇ ರಿಯಾ ಅವರಿಗೆ ಸಂಬಂಧಿಸಿದ ಖರ್ಚುಗಳನ್ನು ಸುಶಾಂತ್ ಸಿಂಗ್ ಅವರ ಅಕೌಂಟೆಂಟ್ ನೋಡಿಕೊಳ್ಳುತ್ತಿದ್ದರು. ಇದನ್ನು ವಂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.
5. ರಿಯಾ ಚಕ್ರವರ್ತಿ ಅವರು ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳನ್ನು ಸಿಬಿಐ ತಳ್ಳಿಹಾಕಿದೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದಿಸುವಂತದ್ದು ಏನೂ ನಡೆದಿಲ್ಲ ಎಂದು ಸಿಬಿಐ ವರದಿಯಲ್ಲಿ ತಿಳಿಸಿದೆ.ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ಪೂರ್ಣ- ಮತ್ತೊಂದು ಆಸ್ಪತ್ರೆಗೆ ದೇಹದ ಭಾಗ ರವಾನೆ



