ಬಳ್ಳಾರಿ: ಮೈತ್ರಿ ಪಕ್ಷದ ಶಾಸಕರು ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದಂತೆ ದೋಸ್ತಿ ನಾಯಕರು ರಿವರ್ಸ್ ಆಪರೇಷನ್‍ಗೆ ಇಳಿದಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ.
ಬಿಜೆಪಿಯವರು ಆಪರೇಷನ್ ಕಮಲ ಮಾಡಿದರೆ ಏನು ಮಾಡಬೇಕು ಎನ್ನುವುದು ನಮಗೆ ಗೊತ್ತು ಎಂದು ಹೇಳಿಕೆ ನೀಡುತ್ತಿದ್ದ ಕೈ ನಾಯಕರ ಪಟ್ಟಿಯಲ್ಲಿದ್ದಾರೆ ಎನ್ನಲಾದ ಬಳ್ಳಾರಿಯ ಸಿರಗುಪ್ಪದ ಬಿಜೆಪಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ಕಳೆದ ರಾತ್ರಿಯಿಂದ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ಭಾನುವಾರ ರಾತ್ರಿಯವರೆಗೂ ಸಿರಗುಪ್ಪದಲ್ಲಿದ್ದ ಶಾಸಕ ಸೋಮಲಿಂಗಪ್ಪ ಇಂದು ಮುಂಜಾನೆಯಿಂದ ಯಾರ ಕೈಗೂ ಸಿಗದೇ ಎಸ್ಕೇಪ್ ಆಗಿರುವುದು ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿದೆ. ಸೋಮಲಿಂಗಪ್ಪ ಹಾಗೂ ಅವರ ಆಪ್ತರ ಮೊಬೈಲ್ ಇಂದು ಮುಂಜಾನೆಯಿಂದ ಸ್ವಿಚ್ ಆಫ್ ಆಗಿವೆ. ಹೀಗಾಗಿ ಬಿಜೆಪಿ ನಾಯಕರು ಶಾಸಕ ಸೋಮಲಿಂಗಪ್ಪ ಸಂಪರ್ಕಿಸಲು ಹರಸಾಹಸ ಮಾಡುತ್ತಿದ್ದಾರೆ.
ಸೋಮಲಿಂಗಪ್ಪಗೆ ಇಂದು ಬಿಜೆಪಿ ನಾಯಕರು ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಿದ್ದರು. ಆದರೆ ಸೋಮಲಿಂಗಪ್ಪ ಮಧ್ಯಾಹ್ನದವರೆಗೂ ಬೆಂಗಳೂರು ತಲುಪದಿರುವುದು ಬಿಜೆಪಿ ನಾಯಕರಲ್ಲಿ ಆತಂಕ ಹೆಚ್ಚಿಸಿದೆ.