ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರಿವರ್ಸ್ ಆಪರೇಷನ್ ಕುರಿತು ಚರ್ಚೆ ನಡೆದಿದ್ದು, ಮೈತ್ರಿ ನಾಯಕರಿಂದ ಆಫರ್ ಬಂದಿತ್ತು ಎಂದು ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಸಭೆಯಲ್ಲಿ ತಿಳಿಸಿದ್ದಾರೆ.
ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ವಿವರಿಸಿದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಕೋನರೆಡ್ಡಿ ಮತ್ತು ಭೀಮಾನಾಯ್ಕ್ ಮೂಲಕ ರಿವರ್ಸ್ ಆಪರೇಷನ್‍ಗೆ ಯತ್ನಿಸಲಾಗಿದ್ದು, ಇಬ್ಬರು ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಆದರೆ, ನಾನು ಅವರ ಆಫರ್ ತಿರಸ್ಕರಿಸಿದ್ದೇನೆ. ನಾನು ಕಳೆದ 25 ವರ್ಷದಿಂದ ಬಿಜೆಪಿಯಲ್ಲಿದ್ದು, ಇದೇ ಪಕ್ಷದಲ್ಲಿ ಇರುತ್ತೇನೆಂದು ತಿಳಿಸಿದೆ ಸಭೆಯ ಗಮನಕ್ಕೆ ತರುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ, ರಿವರ್ಸ್ ಆಪರೇಷನ್ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ ಎಂದರು.
Advertisement
Advertisement
ಬುಧವಾರ ವಿಧಾನಸೌಧದಲ್ಲಿ ಧರಣಿ ನಡೆಸಿ ಬಳಿಕ ರಾಜಭವನಕ್ಕೆ ನಿಯೋಗ ತೆರಳಿ, ಪರಿಸ್ಥಿತಿ ಕುರಿತು ರಾಜ್ಯಪಾಲರ ಗಮನಕ್ಕೆ ತರಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯಪಾಲರು ಮಾತ್ರವಲ್ಲದೆ, ಮತ್ತೊಮ್ಮೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ.
Advertisement
ಬುಧವಾರ ಸಂಜೆ ಮತ್ತೆ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸ್ಪೀಕರ್ ತೀರ್ಮಾನದ ವಿರುದ್ಧ ಕೆಲವು ಬಿಜೆಪಿ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಈ ವೇಳೆ ಯಡಿಯೂರಪ್ಪ ಶಾಸಕರನ್ನು ಸಮಾಧಾನ ಪಡಿಸಿದ್ದಾರೆ. ನಾಳೆಯೂ ಕಾದು ನೋಡೋಣ, ನಾಳೆ ಮತ್ತಿಬ್ಬರು ರಾಜೀನಾಮೆ ನೀಡಬಹುದು. ಆತುರ ಮಾಡೋದು ಬೇಡ, ಪರಿಸ್ಥಿತಿ ನೋಡಿಕೊಂಡು ನಿಧಾನವಾಗಿ ವಿಚಾರಿಸೋಣ ಎಂದು ಯಡಿಯೂರಪ್ಪ ಶಾಸಕರಿಗೆ ತಿಳಿಸಿದ್ದಾರೆ. ಬಿಎಸ್‍ವೈ ನಾಳೆ ಮತ್ತೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಕುತೂಹಲ ಮೂಡಿಸಿದೆ.
Advertisement
ಅರವಿಂದ ಲಿಂಬಾವಳಿ ಅವರು ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಲ್ಲ ಜಿಲ್ಲಾ ಕೇಂದ್ರದಲ್ಲಿ ಹಾಗೂ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆ ನಂತರ ಮಧ್ಯಾಹ್ನ 1ಕ್ಕೆ ರಾಜ್ಯಪಾಲರ ಭೇಟಿ ಮಾಡಿ, ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗುವುದು. ನಂತರ ಮಧ್ಯಾಹ್ನ 3ಕ್ಕೆ ಸ್ಪೀಕರ್ ಭೇಟಿ ಮಾಡಿ, ಶಾಸಕರ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಬೇಕು ಎಂದು ಸ್ಪೀಕರ್‍ಗೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.