ರಾಯಚೂರು: ಗ್ರಾಮ ವಾಸ್ತವ್ಯದಿಂದ ನಮಗೆ ನ್ಯಾಯ ಸಿಗುತ್ತದೆ ಅನ್ನೋ ನಂಬಿಕೆ ಗ್ರಾಮೀಣ ಭಾಗದ ಜನರಲ್ಲಿ ಮೂಡುತ್ತಿದೆ. ಅಧಿಕಾರಿಗಳು ಇನ್ನಷ್ಟು ಶ್ರಮಪಟ್ಟರೆ ಜನರಿಗೆ ಇನ್ನೂ ಅನುಕೂಲವಾಗುತ್ತದೆ ಅಂತ ಕಂದಾಯ ಸಚಿವ ಆರ್.ಅಶೋಕ್ (Revenue Minister R. Ashok) ಹೇಳಿದ್ದಾರೆ.
ಜಿಲ್ಲೆಯ ದೇವದುರ್ಗದ (Devadurga) ಅರಕೇರಾದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಿನ್ನೆಲೆ ಗ್ರಾಮವಾಸ್ತವ್ಯ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ಗ್ರಾಮ ವಾಸ್ತವ್ಯ ವೇಳೆಯೇ ಸೈನಿಕರಿಗೆ ಆರೂವರೆ ಎಕರೆ ಜಮೀನು ಮಂಜೂರು ಮಾಡಲಾಗಿದೆ. ಈ ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಅರಕೇರಾ ನೂತನ ತಾಲೂಕಿಗೆ ಅಧಿಕಾರಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡುತ್ತೇವೆ. ಇಲ್ಲಿನ ಜನ ಮನೆಗಳನ್ನು ಕೇಳುತ್ತಿದ್ದಾರೆ. ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಈಗ 300 ಮನೆಗಳನ್ನು ನೀಡುತ್ತಿದ್ದೇವೆ. 2 ಸಾವಿರ ಅರ್ಜಿಗಳು ಬಂದಿವೆ ಅವುಗಳನ್ನು ಶೀಘ್ರ ವಿಲೇವಾರಿ ಮಾಡುತ್ತೇವೆ ಎಂದರು.
ಇದೇ ವೇಳೆ ಸಚಿವ ಸಂಪುಟದ ವಿಸ್ತರಣೆ, ಈ ಭಾಗಕ್ಕೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ನಾನು ಅದರ ಬಗ್ಗೆ ಪ್ರತಿಕ್ರಿಯೆ ಕೊಡುವುದು ಏನೂ ಇಲ್ಲ ಅಂತ ಅಶೋಕ್ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ರಾಯಚೂರಿಗೆ ಏಮ್ಸ್ ನೀಡುವ ಬಗ್ಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ರಾಯಚೂರನ್ನು ಮಹಾನಗರ ಪಾಲಿಕೆ ಮಾಡಬೇಕಿದೆ. ವಿಮಾನ ನಿಲ್ದಾಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನ ಮೊದಲು ಕಲ್ಪಿಸಬೇಕಿದೆ. ಎಲ್ಲಾ ಅಗತ್ಯ ಸೌಲಭ್ಯಗಳನ್ನ ನೀಡಿದ ಮೇಲೆ ಏಮ್ಸ್‌ಗೆ ಒತ್ತಾಯ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹಾಸನ ಭೀಕರ ಅಪಘಾತ ಪ್ರಕರಣ – ಎಸ್ಕೇಪ್ ಆಗಿದ್ದ ಹಾಲಿನ ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ