ಬೆಳಗಾವಿ: ಸಿಎಂ ಯಡಿಯೂರಪ್ಪ ಅವರ ಆದೇಶಕ್ಕೆ ಕಂದಾಯ ಇಲಾಖೆ ಬೆಲೆ ಕೊಡದೆ, ಪ್ರವಾಹ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗಗಳ ಹಾನಿಗೆ ಹೊರಡಿಸಿದ ಪರಿಹಾರದ ಆದೇಶವನ್ನೇ ತಿದ್ದುಪಡಿ ಮಾಡಿ ನೇಕಾರರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯಲ್ಲಿ ಭಾರೀ ಪ್ರವಾಹದಿಂದ 1763 ವಿದ್ಯುತ್ ಮಗ್ಗಗಳಿಗೆ ಹಾನಿಯುಂಟಾಗಿತ್ತು. ಅದರಲ್ಲಿ ರಾಮದುರ್ಗದಲ್ಲಿ ಹಾನಿಗೊಳಗಾದ ಮಗ್ಗಗಳ ಸಂಖ್ಯೆಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಹಾನಿಯಾಗಿದ್ದ ವಿದ್ಯುತ್ ಮಗ್ಗಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಪ್ರತಿ ಮಗ್ಗಕ್ಕೆ 25 ಸಾವಿರ ರೂ. ಪರಿಹಾರ ಹಣ ನೀಡುವಂತೆ ಅ. 18ಕ್ಕೆ ಸಿಎಂ ಆದೇಶ ಹೊರಡಿಸಿದ್ದರು. ಆದರೆ ಅ.24ಕ್ಕೆ ಸಿಎಂ ಆದೇಶವನ್ನೇ ಕಂದಾಯ ಇಲಾಖೆ ಮಾರ್ಪಾಡು ಮಾಡಿದೆ ಎಂದು ಆರೋಪಿಸಲಾಗುತ್ತಿದೆ.
Advertisement
Advertisement
ಸಿಎಂ ಆದೇಶದಲ್ಲಿ ‘ಹಾನಿಗೊಳಗಾದ ಪ್ರತಿ ಮಗ್ಗಕ್ಕೆ ನಿಗದಿಪಡಿಸಿದ ಮೊತ್ತ’ ಎಂದಿತ್ತು. ಆದರೆ ಇದನ್ನು ಪ್ರತಿ ಮಗ್ಗದ ಬದಲಾಗಿ ‘ಹಾನಿಯಾದ ಮಗ್ಗದ ಪ್ರತಿ ಫಲಾನುಭವಿಯಾದ ಮಗ್ಗದ ಮಾಲೀಕರಿಗೆ’ ಎಂದು ಕಂದಾಯ ಇಲಾಖೆ ತಿದ್ದುಪಡಿ ಮಾಡಿದೆ. ಇದರಿಂದ ನೇಕಾರರಿಗೆ ಮೋಸವಾಗಿದೆ ಎಂದು ಸಿಎಂ ಹಾಗೂ ಕಂದಾಯ ಸಚಿವರ ವಿರುದ್ಧ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.