ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಪೋಸ್ಟ್ ಹಾಕಿದ್ದವರ ವಿರುದ್ಧ ಮಂಗಳೂರು (Mangaluru) ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ 12 ಪ್ರಕರಣಗಳು ದಾಖಲಾಗಿವೆ.
ಇನ್ಸ್ಟಾಗ್ರಾಂ ಪೇಜ್, ಫೇಸ್ಬುಕ್ ಪೋಸ್ಟ್, ವಾಟ್ಸಪ್ ಮೆಸೇಜ್‌ಗಳಲ್ಲಿ ಪ್ರತೀಕಾರದ ಪೋಸ್ಟ್ ಹಾಗೂ ಸಂದೇಶ ರವಾನಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಲ್ಕಿ, ಉರ್ವಾ, ಬರ್ಕೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದ್ರೆ, ಕಾವೂರು ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿವೆ. ಇದನ್ನೂ ಓದಿ: Mangaluru | ಕರಾವಳಿಯಲ್ಲಿ ನಿಲ್ಲದ ಪ್ರತೀಕಾರದ ಹತ್ಯೆ
ಇನ್ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಕಿಡಿಗೇಡಿಗಳು ʻಶತ್ರು ಸಂಹಾರ ಶರುವಾಗಿದೆ, ಪ್ರತಿರೋಧ ಅಪರಾಧವಲ್ಲʼ. ಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ. ʻನಮಗೆ ಯಾವುದೇ ಉತ್ತರಗಳು ಬೇಡ, ರಕ್ತಕ್ಕೆ ರಕ್ತವೇ ಉತ್ತರವಾಗಬೇಕು. ಜೀವಕ್ಕೆ, ಜೀವನೇ ಬೇಕುʼ ಎಂಬ ಸ್ಟೋರಿ ಹಾಕಿಕೊಂಡು ಪ್ರಚೋದನೆ ನೀಡುತ್ತಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಗುರುವಾರ ಬಜ್ಪೆಯ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ನಡೆದಿತ್ತು. ಸುರತ್ಕಲ್‍ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ರಾತ್ರಿ ಹೊಂಚು ಹಾಕಿ ಸುಮಾರು 10 ಮಂದಿ ಸೇರಿ ತಲವಾರಿನಿಂದ ಹತ್ಯೆ ಮಾಡಿದ್ದರು. ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಹತ್ಯೆ ಪ್ರಕರಣದ ಆರೋಪಿಗಳಾದ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಸಮ್ಮೀರ್, ಕಲಂದರ ಶಾಫಿ, ಆದಿಲ್ ಮೆಹರೂಫ್, ನಾಗರಾಜ್, ಮೊಹಮ್ಮದ್ ರಿಜ್ವಾನ್, ರಂಜಿತ್‌ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ವೇಳೆ ಕಾಣಿಸಿಕೊಂಡಿದ್ದ ಬುರ್ಖಾಧಾರಿ ಮಹಿಳೆಯರ ಬಗ್ಗೆ ಪೊಲೀಸ್ ಕಮಿಷನರ್ ಹೇಳಿದ್ದೇನು?