ಮಂಡ್ಯದಲ್ಲಿ ಕುಡಿಯುವ ನೀರಿಗೆ ಸದ್ದು ಮಾಡ್ತಿದೆ ಸೇಡಿನ ರಾಜಕೀಯ

Public TV
1 Min Read
mnd water politics

ಮಂಡ್ಯ: ಲೋಕಸಭಾ ಚುನಾವಣೆಯ ಬಳಿಕ ಮಂಡ್ಯದಲ್ಲಿ ಸೇಡಿನ ರಾಜಕೀಯದ ಸದ್ದು ಜೋರಾಗಿದ್ದು, ಕುಡಿಯುವ ನೀರಿನ ವಿಚಾರದಲ್ಲೂ ರಾಜಕೀಯ ಪ್ರಾರಂಭವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, ಮಂಡ್ಯ ತಾಲೂಕಿನ ಬೇವುಕಲ್ಲುಕೊಪ್ಪಲು ಗ್ರಾಮದಲ್ಲಿ ಸುಮಲತಾಗೆ ಹೆಚ್ಚು ಲೀಡ್ ಬಂದಿದೆ ಎಂಬ ಕಾರಣಕ್ಕೆ ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

mnd water politics 1

ಚುನಾವಣೆಗೂ ಮುನ್ನ ಗ್ರಾಮಕ್ಕೆ ಪ್ರತಿ ನಿತ್ಯ ನೀರು ಪೂರೈಸಲಾಗುತ್ತಿತ್ತು. ಚುನಾವಣಾ ಫಲಿತಾಂಶದ ಬಳಿಕ ವಾರಕ್ಕೊಮ್ಮೆ ನೀರು ಕೊಡುತ್ತಿದ್ದಾರೆ. ಮಧ್ಯರಾತ್ರಿ ನೀರು ಬಿಡುತ್ತಾರೆ. ಕಾದು ನೀರು ಹಿಡಿಯಬೇಕು. ಒಂದು ಮನೆಗೆ ಕೇವಲ ಐದು ಬಿಂದಿಗೆ ಮಾತ್ರ ನೀರು ಸಿಗುತ್ತಿದೆ. ಇದು ಕುಡಿಯುವುದಕ್ಕೂ ಸಾಲದು. ಇನ್ನು ಜಾನುವಾರುಗಳಿಗೆ ಖಾಸಗಿ ಬೋರ್ ವೆಲ್ ಗಳಿಂದ ಹಿಡಿದು ತರಬೇಕಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

mnd water politics 2

ಬೇವುಕಲ್ಲುಕೊಪ್ಪಲು ಗ್ರಾಮ ಬೇವುಕಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿದ್ದು, ಆಯ್ಕೆಯಾಗಿರುವ ಬಹುತೇಕ ಸದಸ್ಯರು ಜೆಡಿಎಸ್ ಬೆಂಬಲಿತರಾಗಿದ್ದಾರೆ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ವಾರಕ್ಕೊಮ್ಮೆ ನೀರು ಬಿಡುವಂತೆ ಸದಸ್ಯರೆಲ್ಲ ತೀರ್ಮಾನ ಮಾಡಿದ್ದಾರೆ. ಬೇವುಕಲ್ಲು ಗ್ರಾಮದಿಂದ ಬೋರ್ ವೆಲ್‍ಗಳಿಂದ ಪಕ್ಕದ ಬೇವು ಕಲ್ಲು, ಬಂಕನಹಳ್ಳಿ ಎರಡು ಊರುಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ನಮ್ಮೂರಿನಿಂದ ಬೇರೆ ಊರಿಗೆ ನೀರು ಕೊಡುತ್ತಿದ್ರೂ, ನಮಗೆ ಸಮರ್ಪಕವಾಗಿ ನೀರು ಕೊಡದೆ ದ್ವೇಷದ ರಾಜಕೀಯಕ್ಕೆ ಗ್ರಾಮ ಪಂಚಾಯ್ತಿಯವರು ಮುಂದಾಗಿದ್ದಾರೆ. ಸದಸ್ಯರು ಸೇಡಿನ ರಾಜಕೀಯ ಬಿಟ್ಟು ಸಮರ್ಪಕ ನೀರು ಕೊಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

mnd water politics 3

2006ರಲ್ಲಿ ಇದೇ ಬೇವುಕಲ್ಲುಕೊಪ್ಪಲು ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೆ ಸಿಎಂ ಪುತ್ರನಿಗೆ ವೋಟು ಹಾಕಿಲ್ಲದ ಕಾರಣಕ್ಕೆ ಈಗ ಗ್ರಾಮಸ್ಥರು ನೀರಿನ ಅಭಾವ ಅನುಭವಿಸಬೇಕಿರುವುದು ವಿಪರ್ಯಾಸ ಎನ್ನಬಹುದು. ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಒ, ಅಧ್ಯಕ್ಷೆಯನ್ನು ಪ್ರಶ್ನೆ ಮಾಡಿದ್ರೆ ಮೊದಲು ನೀರಿನ ಸಮಸ್ಯೆ ಇರಲಿಲ್ಲ. ಈಗ ಸಮಸ್ಯೆಯಾಗಿದೆ. ಹಾಗಾಗಿ 3-4 ದಿನಕ್ಕೆ ನೀರು ಪೂರೈಸಲಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *