Connect with us

Cricket

ಮೊದಲ ಟಿ20ಯಲ್ಲಿ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು

Published

on

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಶಿಶ್ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಎನ್ನುವುದು ರಿವೀಲ್ ಆಗಿದೆ.

ಮಾಜಿ ಕ್ರಿಕೆಟ್ ಆಟಗಾರ ಸಂಜಯ್ ಮಂಜ್ರೇಕರ್ ಜೊತೆ ಮಾತನಾಡಿದ ನೆಹ್ರಾ, ಭಾರತದ ತಂಡದಲ್ಲಿ ಅತಿ ಹೆಚ್ಚು ಬಾರಿ ಕೊನೆಯ ಓವರ್ ಎಸೆದ ಬೌಲರ್ ನಾನು. ಆದರೆ ಈ ಪಂದ್ಯದಲ್ಲಿ ಅಷ್ಟೊಂದು ಒತ್ತಡ ಇರಲಿಲ್ಲ. ನಾಯಕ ವಿರಾಟ್ ಕೊಹ್ಲಿ ಕೊನೆಯ 2-3 ಓವರ್ ಇದ್ದಾಗ ನಾನೇ ಕೊನೆಯ ಓವರ್ ಎಸೆಯುತ್ತೇನೆ ಎಂದು ಹೇಳಿದೆ ಎಂಬುದಾಗಿ ತಿಳಿಸಿದರು.

ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿ, 2003ರಲ್ಲಿ ನೆಹ್ರಾ ವಿಶ್ವಕಪ್ ಆಡುತ್ತಿದ್ದಾಗ ನನಗೆ 13 ವರ್ಷ. ಆ ವೇಳೆ ಶಾಲಾ ತಂಡದಲ್ಲಿ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದೆ. 19 ವರ್ಷಗಳ ಕಾಲ ವೇಗದ ಬೌಲರ್ ಆಗಿ ಜೀವನ ನಡೆಸುವುದು ಸುಲಭದ ಮಾತಲ್ಲ. ವೈಯಕ್ತಿಕವಾಗಿ ನೆಹ್ರಾ ನನಗೆ ಗೊತ್ತಿದ್ದು, ಎಷ್ಟು ಪರಿಶ್ರಮ ಪಟ್ಟಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಇನ್ನು ಮುಂದೆ ಅವರು ತಮ್ಮ ಸುಂದರವಾದ ಕುಟುಂಬದ ಜೊತೆ ಕಾಲ ಕಳೆಯಬಹುದು ಎಂದು ಹೇಳಿ ವಿಶ್ರಾಂತ ಜೀವನಕ್ಕೆ ಶುಭಹಾರೈಸಿದರು.

1979ರ ಏಪ್ರಿಲ್ 29ರಂದು ದೆಹಲಿಯಲ್ಲಿ ಜನಿಸಿದ ನೆಹ್ರಾಗೆ ಈಗ 38 ವರ್ಷ. 1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ನೆಹ್ರಾ 2004ರಲ್ಲಿ ಪಾಕ್ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು.

2001ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಆಡಿದ್ದರೆ, 2011ರಲ್ಲಿ ಮೊಹಾಲಿಯಲ್ಲಿ ಪಾಕ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. 2009ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು.

17 ಟೆಸ್ಟ್ ಗಳಿಂದ 44 ವಿಕೆಟ್ ಪಡೆದಿರುವ ನೆಹ್ರಾ 120 ಏಕದಿನದಿಂದ 157 ವಿಕೆಟ್ ಸಂಪಾದಿಸಿದ್ದಾರೆ. 27 ಟಿ20 ಪಂದ್ಯಗಳಿಂದ 34 ವಿಕೆಟ್ ಗಳಿಸಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ನೆಹ್ರಾ 4 ಓವರ್ ಎಸೆದು 29 ರನ್ ನೀಡಿದ್ದರು.

Click to comment

Leave a Reply

Your email address will not be published. Required fields are marked *