ಬೆಳಗಾವಿ: ಅತ್ತ ಪ್ರವಾಹದಿಂದ ತತ್ತರಿಸಿರುವ ನಿರಾಶ್ರಿತರು ಅಳಲು ತೋಡಿಕೊಳ್ಳುತ್ತಿದ್ದರೆ, ಇತ್ತ ಮೇಜಿನ ಮೇಲೆ ಇರುವ ಬೆಲ್ ಹಿಡಿದು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಆಟವಾಡುತ್ತಾ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಪರಿಹಾರ ಕೇಂದ್ರದಲ್ಲಿ ರೇವಣ್ಣ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಕಳೆದ ಎರಡು ದಿನದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ರೇವಣ್ಣ ಅವರು ಇಂದು ಗೋಕಾಕ್ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ನಿರಾಶ್ರಿತರ ಕೇಂದ್ರದಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ತಮ್ಮ ಸಂಕಷ್ಟವನ್ನು ಹೇಳುತ್ತಿದ್ದರೆ ಇತ್ತ ರೇವಣ್ಣ ಅವರು ಮೇಜಿನ ಮೇಲೆ ಇದ್ದ ಬೆಲ್ ಹಿಡಿದು ಆಟ ಆಡುತ್ತಾ ನಿರ್ಲಕ್ಷ್ಯ ತೋರಿದ್ದಾರೆ. ಆಗ ಅನಿವಾರ್ಯವಾಗಿ ಶಾಸಕ ಕೋನರೆಡ್ಡಿ ಮುಂದೆ ಮಹಿಳೆ ಅಳಲು ತೋಡಿಕ್ಕೊಂಡಿದ್ದಾರೆ.
ಈ ಹಿಂದೆ ಕೊಡಗಿನಲ್ಲಿ ಪ್ರವಾಹ ಉಂಟಾದಾಗ ಸಾಕಷ್ಟು ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು. ಆಗ ನಿರಾಶ್ರಿತ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದ ರೇವಣ್ಣ ಅವರು ಜನರಿಗೆ ಆಹಾರವನ್ನು ಕೈಗೆ ನೀಡುವ ಬದಲು ಬೇಕಾಬಿಟ್ಟಿ ಬಿಸ್ಕೆಟ್ ಎಸೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕೂಡ ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಸಾಕಷ್ಟು ಮಂದಿ ಮನೆಮಠ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೀಗಿರುವಾಗ ರೇವಣ್ಣ ಅವರ ಈ ವರ್ತನೆ ಭಾರೀ ವಿರೋಧಕ್ಕೆ ಕಾರಣವಾಗಿದೆ.