ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಮಂತ್ರಿ ಸ್ಥಾನದ ಜೊತೆಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಈಗ ಕೆಎಂಎಫ್ ಪಟ್ಟದ ಮೇಲೆ ಕಣ್ಣಿಟ್ಟಿದ್ದ ರೇವಣ್ಣಗೆ ನಿರಾಸೆಯಾಗಿದೆ.
ಕೆಎಂಎಫ್ ಅಧ್ಯಕ್ಷ ಸ್ಥಾನ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರ ಪಾಲಾಗಿದೆ. ಮೊದಲು ನನಗೆ ಅಸಮಾಧಾನ ಇದ್ದಿದ್ದು ನಿಜ. ಆದರೆ ಈಗ ಅಸಮಾಧಾನ ಇಲ್ಲ. ಕೆಎಂಎಫ್ ಅಧ್ಯಕ್ಷರ ವಿಚಾರದಲ್ಲಿ ರಾಜೀ ಇಲ್ಲ. ಕಾಂಗ್ರೆಸ್ ಅತೀ ಹೆಚ್ಚು ನಿರ್ದೇಶಕರನ್ನ ಹೊಂದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಬಾರಿ ಕೆಎಂಎಫ್ ವಿಚಾರದಲ್ಲಿ ರಾಜೀ ಇಲ್ಲವೇ ಇಲ್ಲ. ಸರ್ಕಾರ ಉಳಿಸುವ ನಿಟ್ಟಿನಲ್ಲಿ ಸಿಎಲ್‍ಪಿ(ಕಾಂಗ್ರೆಸ್ ಶಾಸಕಾಂಗ ಸಭೆ) ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಒಂದು ವೇಳೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ ಅಂದರೆ ಬೇರೆ ಶಾಸಕರಂತೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಭೀಮಾನಾಯ್ಕ್ ಹೇಳಿದ್ದರು.
ಭೀಮಾನಾಯ್ಕ್ ಮಾತಿಗೆ ಸಿಎಂ ಬೆದರಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಅಂದಹಾಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಭೀಮಾನಾಯ್ಕ್ ನಡುವೆ ತೀವ್ರ ಫೈಟ್ ಶುರುವಾಗಿತ್ತು.
ಈ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಳಿ ರೇವಣ್ಣ ಬೇಡಿಕೆ ಇಟ್ಟಿದ್ದರು. ಎಚ್‍ಡಿಡಿ ಅವರೂ ಕೂಡ ಸಮ್ಮತಿ ಸೂಚಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಭೀಮಾನಾಯ್ಕ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.