– ಹೆಚ್-1ಬಿ ವೀಸಾ ವಾರ್ಷಿಕ ಶುಲ್ಕ 1 ಲಕ್ಷ ಡಾಲರ್‌ಗೆ ಹೆಚ್ಚಳ ಬೆನ್ನಲ್ಲೇ ಪ್ರಮುಖ ಕಂಪನಿಗಳು ಅಲರ್ಟ್
ವಾಷಿಂಗ್ಟನ್: ಅಮೆರಿಕದಿಂದ ಹೊರಗಿರುವ ಹೆಚ್-1ಬಿ ವೀಸಾ (H-1B Visa) ಹೊಂದಿರುವ ತಮ್ಮ ಉದ್ಯೋಗಿಗಳಿಗೆ 24 ಗಂಟೆಯೊಳಗೆ ಯುಎಸ್‌ಗೆ ವಾಪಸ್ ಬನ್ನಿ ಎಂದು ಮೆಟಾ (Meta), ಮೈಕ್ರೋಸಾಫ್ಟ್‌ನಂತಹ (Microsoft) ಪ್ರಮುಖ ಕಂಪನಿಗಳು ಸೂಚನೆ ನೀಡಿವೆ.
ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೆಚ್-1ಬಿ ವೀಸಾ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಘೋಷಣೆ ಅಮೆರಿಕ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್-1ಬಿ ವೀಸಾ ಹೊಂದಿರುವ ತಮ್ಮ ಉದ್ಯೋಗಿಗಳಿಗೆ ಯುಎಸ್‌ಗೆ ತಕ್ಷಣ ಮರಳುವಂತೆ ಸೂಚಿಸಿವೆ. ಇದನ್ನೂ ಓದಿ: ಭಾರತೀಯ ಉದ್ಯೋಗಿಗಳಿಗೆ ಶಾಕ್; H-1B ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದ ಟ್ರಂಪ್
ಪ್ರಸ್ತುತ ಅಮೆರಿಕದ ಹೊರಗೆ ವಾಸಿಸುತ್ತಿರುವ ತಮ್ಮ ಉದ್ಯೋಗಿಗಳಿಗೆ ಮರುಪ್ರವೇಶ ನಿರಾಕರಣೆಯನ್ನು ತಪ್ಪಿಸಲು 24 ಗಂಟೆಗಳ ಒಳಗೆ ದೇಶಕ್ಕೆ ಮರಳುವಂತೆ ಒತ್ತಾಯಿಸಿವೆ. ಎಲ್ಲಾ H-1B ವೀಸಾ ಹೊಂದಿರುವವರು ಕನಿಷ್ಠ 14 ದಿನಗಳ ವರೆಗೆ ಅಮೆರಿಕವನ್ನು ತೊರೆಯದಂತೆ ಒತ್ತಾಯಿಸಿವೆ. ಉತ್ತಮ ಭವಿಷ್ಯಕ್ಕಾಗಿ ನಮ್ಮ ನಿರ್ದೇಶನಗಳನ್ನು ಪಾಲಿಸಿ ಎಂದು ವಿದೇಶಿ ಉದ್ಯೋಗಿಗಳಿಗೆ ಸಲಹೆ ನೀಡಿವೆ.
H-1B ವೀಸಾ ಮತ್ತು H4 ಸ್ಥಾನಮಾನ ಹೊಂದಿರುವವರು, ಅಮೆರಿಕ ಸರ್ಕಾರದ ಹೊಸ ನಿಯಮಗಳು ಏನೆಂದು ತಿಳಿಯುವವರೆಗೆ ಕನಿಷ್ಠ ಎರಡು ವಾರಗಳ ಕಾಲ ಅಮೆರಿಕದಲ್ಲಿಯೇ ಇರಬೇಕು. ಪ್ರಸ್ತುತ ದೇಶದಿಂದ ಹೊರಗೆ ಇರುವವರು 24 ಗಂಟೆಗಳ ಒಳಗೆ ಹಿಂತಿರುಗಬೇಕು ಎಂದು ಮೆಟಾ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನ ನನ್ನ ಮನೆಯಂತೆ ಭಾಸವಾಗುತ್ತೆ, ಭಾರತ ಶಾಂತಿ ಮಾತುಕತೆ ನಡೆಸಬೇಕು: ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದ
ವಿಶೇಷ ವೃತ್ತಿ, ತಂತ್ರಜ್ಞಾನ ಕ್ಷೇತ್ರದಲ್ಲಿರುವ ನುರಿತರಿಗೆ ಅಮೆರಿಕದ ಹೆಚ್-1ಬಿ ವೀಸಾ ಮೀಸಲಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಟೆಕ್ ಪ್ರೋಗ್ರಾಂ ವ್ಯವಸ್ಥಾಪಕರು ಮತ್ತು ಇತರ ಐಟಿ ವೃತ್ತಿಪರರನ್ನು ಈ ವೀಸಾ ಒಳಗೊಂಡಿರುತ್ತದೆ. ಅವು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತವೆ. ಇನ್ನೂ ಮೂರು ವರ್ಷಗಳವರೆಗೆ ನವೀಕರಿಸಬಹುದು.