ನವದೆಹಲಿ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಗಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದ್ದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಪದೇ ಪದೇ ಒತ್ತಾಯ ಮಾಡುತ್ತಲೇ ಇದೆ. ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ನೆಲದಲ್ಲೇ ನಡೆಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ಬಿಸಿಸಿಐ ಮುಂದೆ ಹೊಸ ಪ್ರಸ್ತಾಪ ಇಟ್ಟಿದೆ.
ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ ತಂಡಕ್ಕೆ (Team India) ಪಾಕಿಸ್ತಾನ ಸಂಪೂರ್ಣ ಭದ್ರತೆ ಒದಗಿಸಲಿದೆ. ಭಾರತ ತಂಡಕ್ಕೆ ಸುಲಭವಾಗಲೆಂದೇ ತಂಡದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಿಗದಿಪಡಿಸಲಾಗಿದೆ. ಭಾರತೀಯ ಅಭಿಮಾನಿಗಳಿಗೂ ಇದು ಅನುಕೂಲವಾಗಲಿದೆ. ಭಾರತ ತಂಡದ ಗುಂಪು ಹಂತದ ಪಂದ್ಯಗಳಿಗೆ ಅಂತರ ಇರುವುದರಿಂದ ಪ್ರತಿ ಪಂದ್ಯ ಮುಗಿದ ಬಳಿಕ ಸ್ವದೇಶಕ್ಕೆ ಮರಳಬಹುದು ಎಂದು ಬಿಸಿಸಿಐಗೆ (BCCI) ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪತ್ರ ಬರೆದಿದೆ. ಇದನ್ನೂ ಓದಿ: ಟೀಕೆಗಳಿಗೆ ತಕ್ಕ ಉತ್ತರ – 1,338 ದಿನಗಳ ಬಳಿಕ ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದ ಪಾಕ್
ಭಾರತದ ಪಂದ್ಯಗಳು ಲಾಹೋರ್‌ನಲ್ಲಿ ಆಯೋಜಿಸಲಾಗಿದ್ದು, ಪಂಜಾಬ್‌ನ ಚಂಡೀಗಢ ಇದಕ್ಕೆ ಹತ್ತಿರದಲ್ಲಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಉಳಿಯಲು ಇಚ್ಛಿಸದಿದ್ದರೆ, ಭದ್ರತೆ ಕೊರತೆ ಅನ್ನಿಸಿದರೆ, ಪ್ರತಿ ಪಂದ್ಯ ಮುಗಿದ ಬಳಿಕ ಚಂಡೀಗಢ ಅಥವಾ ದೆಹಲಿಗೆ ಟೀಂ ಇಂಡಿಯಾ ವಾಪಸ್ ಬರಬಹುದು ಎಂದು ಪತ್ರದಲ್ಲಿ ತಿಳಿಸಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಜಿಯೋದಲ್ಲಿ ಐಪಿಎಲ್ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!
ಭಾರತ ಸರ್ಕಾರ ಭದ್ರತಾ ಕಾರಣಗಳಿಗಾಗಿ ತಂಡವನ್ನು ಕಳುಹಿಸಲು ಅನುಮತಿ ನಿರಾಕರಿಸಿದ್ದರೆ, ಬಿಸಿಸಿಐ (BCCI) ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದು ಪಟ್ಟು ಹಿಡಿದಿದ್ದ ಪಾಕ್ ಇದೀಗ ಹೊಸ ಪ್ರಸ್ತಾಪವನ್ನ ಬಿಸಿಸಿಐ ಮುಂದಿಟ್ಟಿದೆ. ಅಲ್ಲದೇ ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಅಲ್ಲಿನ ಸರ್ಕಾರ ಹಾಗೂ ಪಿಸಿಬಿ ಮನವಿ ಸಹ ಸಲ್ಲಿಸಿದೆ ಎಂದು ಹೇಳಲಾಗಿದೆ.
ಭಾರತದ ಪಂದ್ಯಗಳು ಹೇಗಿವೆ?
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮೂರು ಗುಂಪು ಹಂತದ ಪಂದ್ಯಗಳನ್ನಾಡಲಿದೆ. ಸದ್ಯದ ವೇಳಾಪಟ್ಟಿಯ ಪ್ರಕಾರ ಫೆಬ್ರವರಿ 20 ರಂದು ಬಾಂಗ್ಲಾದೇಶದ ವಿರುದ್ಧ, ಫೆಬ್ರವರಿ 23 ರಂದು ಪಾಕಿಸ್ತಾನದ ವಿರುದ್ಧ, ಮಾರ್ಚ್ 2 ಎಂದು ನ್ಯೂಜಿಲೆಂಡ್ ವಿರುದ್ಧ ನಿಗದಿಯಾಗಿದೆ. ಈ ನಡುವೆ ಭಾರತ ಮತ್ತು ಕಿವೀಸ್ ನಡುವಿನ ಪಂದ್ಯವನ್ನು ಲಾಹೋರ್‌ನಿಂದ ರಾವಲ್ಪಿಂಡಿಗೆ ವರ್ಗಾಯಿಸುವ ಚರ್ಚೆಗಳೂ ನಡೆದಿವೆ.
ಭಾರತ ಪಾಕ್ ತಂಡ ಪ್ರವೇಶಿಸುವ ಯಾವುದೇ ಸಾಧ್ಯತೆಗಳೂ ಇಲ್ಲದ ಕಾರಣ ಭಾರತದ ಲೀಗ್ ಪಂದ್ಯಗಳನ್ನ ಪಾಕ್‌ನಿಂದ ಹೊರಗೆ ನಡೆಸಬೇಕಾಗುತ್ತದೆ. ಒಂದು ವೇಳೆ ಭಾರತ ಫೈನಲ್ ತಲುಪಿದರೆ ದುಬೈನಲ್ಲಿ ನಡೆಯಲಿದೆ, ಅದರ ಖರ್ಚು ವೆಚ್ಚವನ್ನೂ ಐಸಿಸಿ ಬರಿಸಲಿದೆ ಎಂದು ಹೇಳಿದೆ.