ಉಡುಪಿ: ಇಲ್ಲಿನ ನಿವೃತ್ತ ಶಿಕ್ಷಕರೊಬ್ಬರು ತನ್ನೂರಿಗೊಂದು ರಸ್ತೆ ಬೇಕು ಅಂತ ಕಳೆದ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ರಾಜ್ಯ ಸರ್ಕಾರದ ಮೊರೆ ಹೋದ್ರೂ ಪ್ರಯೋಜನವಾಗದೆ ಕೊನೆಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ನಿವೃತ್ತ ಶಿಕ್ಷಕರಾಗಿರೋ ಗಣಪತಿ ರಸ್ತೆಗಾಗಿ ಹೋರಾಡುತ್ತಿರುವವರು. ಉಡುಪಿಯ ಹೆಬ್ರಿ ಸಮೀಪದ ಕಳ್ತೂರಿನವರಾದ ಇವರಿಗೆ 85 ವರ್ಷ ವಯಸ್ಸು. ಊರುಗೋಲು ಹಿಡ್ಕೊಂಡು ತಿರುಗೋ ಇವರು ನಮಗೆ ಏನಾದ್ರೂ ಸೌಲಭ್ಯ ಕೊಡಿ ಅಂತಿಲ್ಲ. ಬದಲಾಗಿ ನಮ್ಮೂರಿಗೊಂದು ರಸ್ತೆ ಮಾಡಿಕೊಡಿ ಅಂತಿದ್ದಾರೆ. ಇದಕ್ಕಾಗಿ ಈ ಜೀವ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾ.ಪಂ ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ಪತ್ರ ಬರೆದು ಬರೆದು ಸುಸ್ತಾದ್ರು. ಆದ್ರೂ ಕೆಲಸ ಆಗಿಲ್ಲ. ಪ್ರಯತ್ನ ಬಿಡದೇ ಕೊನೆಗೆ ಪ್ರಧಾನಿಗೂ ಪತ್ರ ಬರೆದೇ ಬಿಟ್ಟರು.
ಪ್ರಧಾನಿ ಕಚೇರಿಗೆ ಪತ್ರ ಬರೆದು 6 ತಿಂಗಳೊಳಗೆ ಅಲ್ಲಿಂದ ರಿಪ್ಲೈ ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಪ್ರಧಾನಿ ಹೇಳಿ 6 ತಿಂಗಳು ಕಳೆದಿದೆ. ಆದ್ರೆ ರಾಜ್ಯ ಸರ್ಕಾರ ಅದರ ಬಗ್ಗೆ ಯೋಚನೆ ಮಾಡೋದ್ ಬಿಡಿ, ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ಕೊಟ್ಟಿಲ್ಲ.
ಒಟ್ಟಿನಲ್ಲಿ ಇಳಿ ವಯಸ್ಸಿನಲ್ಲೂ ತಮ್ಮೂರಿಗೆ ಒಂದು ರಸ್ತೆ ಆಗ್ಬೇಕು ಅಂತಾ ಹೋರಾಡ್ತಿರೋ ಈ ಹಿರಿ ಜೀವದ ಪ್ರಯತ್ನವನ್ನು ಮೆಚ್ಚಲೇ ಬೇಕು. ಆದ್ರೆ ಸರ್ಕಾರ ಮಾತ್ರ ರಸ್ತೆಯಲ್ಲಿ ಓಡಾಡುವ ಭಾಗ್ಯ ಕರುಣಿಸ್ತಿಲ್ಲ. ಹೀಗಾಗಿ ಕಳ್ತೂರಿಗೆ ಗದ್ದೆಯಂತಹ ರಸ್ತೆಯೇ ಗತಿ ಆಗಿದೆ.