ಬಸ್‍ನಲ್ಲಿ ಪತ್ನಿಗೆ ಸೀಟ್ ಕೇಳಿದ ಮಾಜಿ ಸೈನಿಕನ ಮೇಲೆ ಯುವಕರಿಂದ ಹಲ್ಲೆ

Public TV
2 Min Read
HVR HALLE ARREST

ಹಾವೇರಿ: ಬಸ್‍ನಲ್ಲಿ ಪತ್ನಿಗೆ ಸೀಟ್ ಬಿಟ್ಟುಕೊಡಿ ಎಂದು ಕೇಳಿದ ಮಾಜಿ ಯೋಧನ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಈ ಪೈಕಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಡಗಿ ತಾಲೂಕಿನ ಕುಮ್ಮೂರು ಗ್ರಾಮದ ಪರಮೇಶಪ್ಪ ಬಾರಂಗಿ (38) ಹಲ್ಲೆಗೊಳಗಾದ ಮಾಜಿ ಯೋಧ. ಹಾವೇರಿ ನಿವಾಸಿಗಳಾದ ಅಲ್ಲಾವುದ್ದಿನ್ ಕಮಲಾಪುರ್ (29), ಕುತ್ಬುದ್ದಿನ್ (28), ಮೈನೂದ್ದಿನ್ (34) ಬಂಧಿತ ಆರೋಪಿಗಳು.

HVR HALLE ARREST 1

ಆಗಿದ್ದೇನು?:
ಪರಮೇಶಪ್ಪ ಅವರ ಸುಮಾರು ಒಂದು ವರ್ಷದ ಮಗಳಿಗೆ ಭೇದಿ ಕಾಣಿಸಿಕೊಂಡಿತ್ತು. ಹೀಗಾಗಿ ಮಗಳನ್ನು ಹಾವೇರಿಯ ಪಂಡಿತ್ ಆಸ್ಪತ್ರೆಗೆ ದಾಖಲಿಸಿ, ಕಳೆದ ಮೂರು ದಿನಗಳಿಂದ ಚಿಕಿತ್ಸೆ ಕೊಡಿಸಿಸಿದ್ದರು. ಮಗಳು ಚೇತರಿಸಿಕೊಂಡಿದ್ದರಿಂದ ವೈದ್ಯರು ಇಂದು ಡಿಸ್ಚಾರ್ಜ್ ಮಾಡಿದ್ದರು. ಪರಮೇಶಪ್ಪ ಅವರು ಪತ್ನಿ ಹಾಗೂ ಮಗಳ ಜೊತೆಗೆ ಇಂದು ಸಂಜೆ ಬಸ್‍ನಲ್ಲಿ ಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಅಲ್ಲಾವುದ್ದಿನ್ ಕಮಲಾಪುರ್ ಸೇರಿದಂತೆ ಕೆಲವರು ತಮ್ಮ ಸಂಬಂಧಿಕರಿಗೆ ಸೀಟ್ ಹಿಡಿದಿದ್ದರು. ಅವರ ಪಕ್ಕದಲ್ಲಿಯೇ ಪರಮೇಶಪ್ಪ ಕೂಡ ಬ್ಯಾಗ್ ಇಟ್ಟಿದ್ದರು. ನಾವು ನಿಮಗಿಂತ ಮೊದಲೇ ಸೀಟ್ ಹಿಡಿದಿದ್ದೇವೆ. ಹೀಗಾಗಿ ಸೀಟ್ ಬಿಟ್ಟುಕೊಡಲ್ಲ ಎಂದು ಅಲ್ಲಾವುದ್ದಿನ್ ಸಂಬಂಧಿಕರು ಗಲಾಟೆ ಮಾಡಿದ್ದಾರೆ.

HVR HALLE ARREST 2

ಮಗುವಿಗೆ ಹುಷಾರಿಲ್ಲ. ತಾಯಿ ಮಗು ಕುಳಿತುಕೊಳ್ಳಲು ಜಾಗ ಕೊಡಿ ಎಂದು ಪರಮೇಶಪ್ಪ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಅಲ್ಲಾವುದ್ದಿನ್, ಕುತ್ಬುದ್ದಿನ್, ಮೈನೂದ್ದಿನ್ ಸೇರಿದಂತೆ ಅವರ ಸಂಬಂಧಿಕರು ಪರಮೇಶಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪರಮೇಶಪ್ಪ ಅವರ ಪತ್ನಿಯ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಗಲಾಟೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪರಮೇಶಪ್ಪ ಅಸ್ವಸ್ತಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದ ಕೆಲವರು ಪಾರಾರಿಯಾಗಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

HVR HALLE ARREST 3

ಈ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಯೋಧನ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು. ಎಲ್ಲರನ್ನೂ ಬಂಧಿಸಬೇಕು ಎಂದು ಸ್ಥಳೀಯರು ಠಾಣೆಯ ಮುಂದೆ ನಿಂತು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *