ಭೋಪಾಲ್: ಮಗ ಮನೆಯಲ್ಲಿ ಇಲ್ಲದ ವೇಳೆ ಮಾವನೊಬ್ಬ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ್ದು, ಈಗ ಮಾವನ ವಿರುದ್ಧ ಸೊಸೆ ದೂರು ನೀಡಿದ್ದಾರೆ.
ಆರೋಪಿಯನ್ನು ಸಚಿವಾಲಯದ ನಿವೃತ್ತ ಕ್ಲರ್ಕ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿ ವಿರುದ್ಧ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಾವನನ್ನು ಬಂಧಿಸಿದ್ದಾರೆ.
ಘಟನೆಯ ವಿವರ:
ನಾಗ್ಪುರ ನಿವಾಸಿ 30 ವರ್ಷದ ಮಹಿಳೆಗೆ 63 ವರ್ಷದ ನಿವೃತ್ತ ಕ್ಲರ್ಕ್ ನ ಮಾನಸಿಕ ಅಸ್ವಸ್ಥ ಮಗನ ಜೊತೆ ಏಪ್ರಿಲ್ 24ರಂದು ಮದುವೆ ನಡೆದಿತ್ತು. ಇವರು ಪ್ರೊಫೆಸರ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಮೇ 12 ರಂದು ಮಗ ಮನೆಯಿಂದ ಹೊರ ಹೋಗಿದ್ದಾನೆ. ಈ ವೇಳೆ ಆರೋಪಿ ಮಾವ ಸೊಸೆ ಇದ್ದ ರೂಮಿಗೆ ನುಗ್ಗಿ ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಭಾರತ್ ಪ್ರತಾಪ್ ಸಿಂಗ್ ಅವರು ತಿಳಿಸಿದ್ದಾರೆ.
ಆರೋಪಿ ಮಾವ ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಸಂತ್ರಸ್ತೆ ಹೆದರಿ ಸುಮ್ಮನಿದ್ದಾರೆ. ಆದರೆ ಆರೋಪಿ ಮಾವ ಮತ್ತೆ ಜುಲೈ 25 ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ ಸಂತ್ರಸ್ತೆ ತಮ್ಮ ಅಜ್ಜನ ಮನೆಗೆ ತೆರಳಿ, ಅಲ್ಲಿ ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಕೊನೆಗೆ ಅವರು ಪೊಲೀಸ್ ದೂರು ನೀಡುವಂತೆ ಹೇಳಿದ್ದಾರೆ. ಅದರಂತೆ ಸಂತ್ರಸ್ತೆ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಮಾವನ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಯ ಪತ್ನಿ ಒಂದು ವರ್ಷದ ಹಿಂದೆಷ್ಟೇ ಮೃತಪಟ್ಟಿದ್ದಾರೆ. ನನ್ನ ಪತಿ ಮಾನಸಿಕವಾಗಿ ದುರ್ಬಲರಾಗಿದ್ದಾರೆ. ಮದುವೆ ನಂತರ ಮಾವನ ಮಾತುಗಳು, ವರ್ತನೆ ಸರಿ ಇರಲಿಲ್ಲ. ಆದರೂ ನಾನು ಸುಮ್ಮನಿದ್ದೆ. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲು ನನಗೆ ಧೈರ್ಯವಿರಲಿಲ್ಲ. ಈಗ ನನ್ನ ಕುಟುಂಬದವರ ಸಹಾಯದಿಂದ ದೂರು ನೀಡಿದ್ದೇನೆ ಎಂದು ನೊಂದ ಸಂತ್ರಸ್ತೆ ಹೇಳಿಕೊಂಡಿದ್ದಾರೆ ಅಂತ ಸಿಂಗ್ ಅವರು ತಿಳಿಸಿದ್ದಾರೆ.